ಒಂದೇ ಹಂತದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, ಮೇ 13ರಂದು ಫಲಿತಾಂಶ

New Project
Published on

ನವದೆಹಲಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು (ಮಾರ್ಚ್​.29) ಮುಹೂರ್ತ ಫಿಕ್ಸ್​ ಮಾಡಿದೆ. ರಾಜಕೀಯ ಚಟುವಟಿಕೆ ಇನ್ನು ಮುಂದೆ ಇನ್ನಷ್ಟು ವೇಗ ಪಡೆದುಕೊಳ್ಳಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿರಲಿದೆ. 

ಇಂದು ದೆಹಲಿಯಲ್ಲಿ ನಡೆದ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯೋಗದ ಮುಖ್ಯಸ್ಥರಾದ ರಾಜೀವ್ ಕುಮಾರ್ ಅವರು ದಿನಾಂಕ ಘೋಷಣೆ ಮಾಡಿದರು.  ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 13ರಂದು ಫಲಿತಾಂಶ ಹೊರ ಬೀಳಲಿದೆ. ಹಲವು ಹಂತಗಳ ಚುನಾವಣಾ ಪದ್ಧತಿಗೆ ಈ ಬಾರಿ ರಾಜ್ಯದಲ್ಲಿ ಬ್ರೇಕ್​ ಬಿದ್ದಿದ್ದೆ. ಕೇವಲ ಮೂರು ದಿನಗಳ ಹಂತದಲ್ಲಿ ಮತದಾನ ನಡೆದು ಫಲಿತಾಂಶವು ಪ್ರಕಟವಾಗಲಿದೆ.

ಯಾವ್ಯಾವ ದಿನ ಏನೇನು?
* ಅಧಿಸೂಚನೆ ಪ್ರಕಟ: ಏಪ್ರಿಲ್​ 13
* ನಾಮಪತ್ರ ಸಲ್ಲಿಕೆಯ ಕೊನೆಯ ದಿನ: ಏಪ್ರಿಲ್​ 20
* ನಾಮಪತ್ರ ಮರುಪರಿಶೀಲನೆಗೆ ಕೊನೆಯ ದಿನ: ಏಪ್ರಿಲ್​​ 21
* ನಾಮಪತ್ರ ಹಿಂಪಡೆಯಲು ಕೊನೆಯ ದಿನ: ಏಪ್ರಿಲ್​ 24
* ಮತದಾನದ ದಿನ: ಮೇ 10
* ಮತ ಎಣಿಕೆ ಅಥವಾ ಫಲಿತಾಂಶ ದಿನ: ಮೇ. 13
* ಸಂಪೂರ್ಣ ಚುನಾವಣಾ ಚಟುವಟಿಕೆ ಮುಕ್ತಾಯದ ದಿನ: ಮೇ 15

ಮೇ 23ರ ಒಳಗಡೆ ಹೊಸ ಸರ್ಕಾರ ರಚನೆ ಆಗಬೇಕೆಂದು ರಾಜೀವ್ ಕುಮಾರ್ ತಿಳಿಸಿದರು. ಇದೇ ಮೊದಲ ಬಾರಿಗೆ ಅಂಗವಿಕಲರು ಮತ್ತು 80 ವರ್ಷ ಮೇಲ್ಪಟ್ಟವರು ಮನೆಯಿಂದಲೇ ಮತದಾನ ಮಾಡುವ ಅವಕಾಶ ಸಿಗಲಿದೆ. ರಾಜ್ಯದಲ್ಲಿ ಒಟ್ಟು 5 ಕೋಟಿ 21 ಲಕ್ಷ ಮತದಾರರಿದ್ದಾರೆ. ಒಟ್ಟು 58,282 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ನಗರದಲ್ಲಿ 24,063 ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗುವುದು ಮತ್ತು ಗ್ರಾಮೀಣ ಭಾಗದಲ್ಲಿ 34,219 ಮತಗಟ್ಟೆಗಳು ಸ್ಥಾಪಿಸಲಾಗುತ್ತದೆ. 

ಕರ್ನಾಟಕದಲ್ಲಿ 12.15 ಲಕ್ಷ ಯುವ ಮತದಾರರಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ 2 ಕೋಟಿ 51 ಲಕ್ಷ ಮಹಿಳಾ ಮತದಾರರು ಹಾಗೂ 2.62 ಕೋಟಿ ಪುರುಷ ಮತದಾರರಿದ್ದಾರೆ. 5.5 ಲಕ್ಷ ವಿಶೇಷಚೇತನ ಮತದಾರರಿದ್ದಾರೆ. 

2018-19 ರಿಂದ ಕರ್ನಾಟಕದಲ್ಲಿ ಮೊದಲ ಬಾರಿ ಮತದಾನ ಮಾಡುವ ಮತದಾರರ ಸಂಖ್ಯೆ 9.17 ಲಕ್ಷದಷ್ಟು ಹೆಚ್ಚಿದ್ದಾರೆ. ಏಪ್ರಿಲ್ 1ಕ್ಕೆ 18 ವರ್ಷ ತುಂಬುವ ಎಲ್ಲ ಯುವ ಮತದಾರರು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಬಹುದು ಎಂದು ರಾಜೀವ್​ ಕುಮಾರ್​ ಅವರು ತಿಳಿಸಿದರು.

ಚುನಾವಣಾ ದಿನಾಂಕ ಘೋಷಣೆ ಆದ ಹಿನ್ನೆಲೆಯಲ್ಲಿ ಇಂದಿನಿಂದ ನೀತಿ ಸಂಹಿತೆ ರಾಜ್ಯದಲ್ಲಿ ಜಾರಿಯಾಗಿದ್ದು ಯಾವುದೇ ಹೊಸ ಯೋಜನೆಗಳು ಕಾಮಗಾರಿಗಳನ್ನು ಘೋಷಣೆ ಮಾಡುವಂತಿಲ್ಲ. ಇನ್ನು ರಾಜಕೀಯ ಚದುರಂಗದಾಟ ಮತ್ತೊಂದು ಹಂತ ತಲುಪಲಿದ್ದು ಕದನ ಕಣ ರಂಗೇರಲಿದೆ. 

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಅವಧಿ ಮೇ 24ಕ್ಕೆ ಕೊನೆಗೊಳ್ಳಲಿದೆ. ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 150 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಬಿಜೆಪಿ ಹೊಂದಿದೆ. ಏತನ್ಮಧ್ಯೆ, ಕಾಂಗ್ರೆಸ್ ಮತ್ತು ಜೆಡಿಎಸ್ ಕ್ರಮವಾಗಿ 124 ಮತ್ತು 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net