

ಮಾಯಕೊಂಡ: ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಇಸ್ರೋ ಸಂಸ್ಥೆ ಮುಖ್ಯ ವಿಜ್ಞಾನಿ ವಿಷ್ಣು ರಾಮಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರಾಷ್ಟ್ರೀಯ ಬಾಹ್ಯಾಕಾಶ ದಿನದ ಪ್ರಯುಕ್ತ ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಐಐಎಸ್ಸಿ ಹಾಗೂ ಇಸ್ರೋ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಉತ್ತಮ ಗುರಿ, ಉದ್ದೇಶಗಳನ್ನಿಟ್ಟುಕೊಂಡು ಓದಬೇಕು. ಡಾಕ್ಟರ್, ಎಂಜಿನಿಯರ್, ಶಿಕ್ಷಕ ವಿಜ್ಞಾನಿ, ಐಎಎಸ್, ಐಪಿಎಸ್ ಅಧಿಕಾರಿಗಳೂ ಆಗಬಹುದು. ಆದ್ದರಿಂದ ಶಿಕ್ಷಣದ ಕಡೆ ಗಮನ ಹರಿಸಿ ಎಂದರು.
ಇಸ್ರೋ ವಿಶ್ವ ಮೆಚ್ಚಿದ ಬಾಹ್ಯಾಕಾಶ ಸಂಸ್ಥೆಯಾಗಿದೆ. ಚಂದ್ರಯಾನ -3 ಯಶಸ್ವಿಯಾಗಿ ಉಡಾವಣೆಯಾಗಿ ಚಂದ್ರನ ಮೇಲೆ ಸ್ಪರ್ಶ ಮಾಡುವವರೆಗೂ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿತು ಎಂದು ಹೇಳಿದರು.
1970ರಲ್ಲಿ ವಿಕ್ರಂ ಸಾರಾಭಾಯಿ, ಗುಜರಾತಿನಿಂದ ಹೋಮಿಯೋ ಜಹಾಂಗೀರ್ ಬಾಬಾ ಈ ಇಬ್ಬರು ಗೆಳೆಯರು ಸೇರಿ ಕೇರಳದಲ್ಲಿ ಇಸ್ರೋ ಸಂಸ್ಥೆ ಹುಟ್ಟು ಹಾಕಿದರು. ಭಾರತ ಸರ್ಕಾರ ಸಂಸ್ಥೆಯ ಪ್ರಗತಿಗೆ ಸಾಕಷ್ಟು ಮುತುವರ್ಜಿ ವಹಿಸಿದೆ ಎಂದರು.
ಮೊಟ್ಟ ಮೊದಲು ಆರ್ಯಭಟ, ಭಾಸ್ಕರ ಇಂತಹ ಉಪಗ್ರಹಗಳನ್ನು ಉಡಾವಣೆ ಮಾಡುವುದರೊಂದಿಗೆ ಯಶಸ್ಸು ಸಾಧಿಸಿತು. ನಂತರ ಜಿಪಿಎಸ್ ಆಂಟೆನಾದಿಂದ ಸಿಗ್ನಲ್ ಮೂಲಕ ಚಿಕ್ಕ ಚಿಕ್ಕ ಉಪಗ್ರಹಗಳನ್ನು ಉಡಾಯಿಸುವುದರೊಂದಿಗೆ ಕೃಷಿ, ತೋಟಗಾರಿಕೆ, ನೀರಾವರಿ, ಮೀನುಗಾರಿಕೆ ಮತ್ತಿತರ ಕ್ಷೇತ್ರಗಳ ಪ್ರಗತಿಗೆ ಸ್ಯಾಟಲೈಟ್‌ನ ನೆರವು ಪಡೆಯಲಾಯಿತು ಎಂದು ತಿಳಿಸಿದರು.
ಕೆಪಿಎಸ್ ಶಾಲೆಯ ಪಿಯು ವಿಭಾಗ, ಪ್ರೌಢಶಾಲಾ ವಿಭಾಗ ಮತ್ತು ಪ್ರಾಥಮಿಕ ವಿಭಾಗದ 1200 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಉಪಗ್ರಹ ಉಡಾವಣೆಯ ಮಾಹಿತಿ ತಿಳಿಸಿಕೊಟ್ಟರು.