ಶಿರೂರಿನಲ್ಲಿ ಮತ್ತೆ ಕಾರ್ಯಾಚರಣೆ ಶುರು

Barge
Published on

ಕಾರವಾರ:ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಉಂಟಾದ ದ್ವೀಪವನ್ನು ತೆರವು ಮಾಡುವ ಕಾರ್ಯಾಚರಣೆ ಸೆ.19 ರಿಂದ ಮತ್ತೆ ಪ್ರಾರಂಭವಾಗುವ ಸಾಧ್ಯತೆ ಇದೆ. ಕಾರ್ಯಾಚರಣೆಗೆ ಬೇಕಾದ ಬಾರ್ಜ್, ಹೂಳೆತ್ತುವ ಯಂತ್ರಗಳು ಬುಧವಾರ ಕಾರವಾರ ತಲುಪಿವೆ. ಸಮುದ್ರ ಹಾಗೂ ಗಂಗಾವಳಿ ನದಿಯ ಉಬ್ಬರ, ಇಳಿತಗಳನ್ನು ಆಧರಿಸಿ ಬಾರ್ಜ್ನ್ನು ಶಿರೂರಿಗೆ ಕೊಂಡೊಯ್ಯಲಾಗುವುದು ಎಂದು ಕಂಪನಿ ಅಧಿಕಾರಿಗಳು ತಿಳಿಸಿದ್ದಾರೆ.
1 ಮೀಟರ್ ಆಳದ ಬಾರ್ಜ್ ನಲ್ಲಿ ಹೂಳೆತ್ತುವ ಹಿಟಾಚಿ ಯಂತ್ರ, ಬೃಹತ್ ವಸ್ತುಗಳನ್ನು ಎತ್ತಬಹುದಾದ ಕ್ರೇನ್ ಹಾಗೂ ಮಣ್ಣಿನಡಿ ಬಾರ್ಜ್ ಘಟ್ಟಿ ನಿಲ್ಲಲು ಅನುಕೂಲವಾಗುವಂತೆ ಎತ್ತರದ ಬೃಹತ್ ಕಬ್ಬಿಣದ ಊರುಗಾಲು(ಬ್ಯಾಕೋವ್) ಹಾಗೂ ಬಾರ್ಜ್ ಎಳೆದೊಯ್ಯಲು 2 ಟಗ್ ಮುಂತಾದ ಸಾಧನಗಳಿವೆ. ಗೋವಾದಿಂದ ಈ ಯಂತ್ರಗಳನ್ನು ಕಂಪನಿ ತರಿಸಿದೆ.
ಅಭಿಷೇನಿಯಾ ಓಷನ್ ಸರ್ವೀಸ್ ಕಂಪನಿ 91 ಲಕ್ಷ ರೂ.ಗೆ ಕಾರ್ಯ ನಿರ್ವಹಿಸಲು ಮುಂದಾಗಿದ್ದು, ಅದರಲ್ಲಿ 41 ಲಕ್ಷ ರೂ.ಗಳನ್ನು ರಾಷ್ಟ್ರೀಯ ಹೆದ್ದಾರಿ 66 ರ ಗುತ್ತಿಗೆ ನಿರ್ವಹಿಸುತ್ತಿರುವ ಐಆರ್‌ಬಿ ಕಂಪನಿ ನೀಡಿದೆ. ಹೊನ್ನಾವರದ ಬಂದರು ಕಂಪನಿ 5 ಲಕ್ಷ ರೂ.ಗಳನ್ನು ನೀಡಿದೆ. ಉಳಿದ ಹಣವನ್ನು ಭಟ್ಕಳ, ಕಾರವಾರ ಹಾಗೂ ಶಿರಸಿಯ ಶಾಸಕರ ಪ್ರದೇಶಾಭಿವೃದ್ಧಿ ನಿಽಯಲ್ಲಿ ಹೊಂದಿಸುವುದಾಗಿ ಶಾಸಕ ಸತೀಶ ಸೈಲ್ ಭರವಸೆ ನೀಡಿದ್ದಾರೆ.

ಕಳೆಯಿತು ಎರಡು ತಿಂಗಳು
ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೇಲೆ ಜುಲೈ 16 ರಂದು ಗುಡ್ಡ ಕುಸಿದು ಬಿದ್ದಿತ್ತು. ಒಟ್ಟು 11 ಜನ ನಾಪತ್ತೆಯಾಗಿದ್ದರು. ದುರ್ಘಟನೆ ಸಂಭವಿಸಿ 2 ತಿಂಗಳು ಕಳೆದಿದೆ. ಇದುವರೆಗೆ 8 ಜನರ ಮೃತ ದೇಹಗಳು ಮಾತ್ರ ಸಿಕ್ಕಿವೆ. ಶಿರೂರಿನ ಜಗನ್ನಾಥ ನಾಯ್ಕ, ಗಂಗೆಕೊಳ್ಳದ ಲೋಕೇಶ ನಾಯ್ಕ ಹಾಗೂ ಕೇರಳದ ಅರ್ಜುನ ಅವರು ಇದುವರೆಗೂ ನಾಪತ್ತೆಯಾಗಿದ್ದಾರೆ. ಗುಡ್ಡ ಕುಸಿದು ಹೆದ್ದಾರಿ ಪಕ್ಕದ ಕಾಳಿ ನದಿಯಲ್ಲಿ ಮಣ್ಣು, ಕಲ್ಲು ತುಂಬಿ ಒಂದು ದ್ವೀಪ ಸೃಷ್ಟಿಯಾಗಿದೆ. ಅದರಡಿ ಎರಡು ಮರ, ಲಾರಿ ಇರುವುದನ್ನು ಆಧುನಿಕ ಯಂತ್ರಗಳ ಈಗಾಗಲೇ ಪತ್ತೆ ಮಾಡಲಾಗಿದೆ. ಅಲ್ಲದೇ ಮುಳುಗು ತಜ್ಞ ಈಶ್ವರ ಮಲ್ಪೆ ಸಹ ಅವುಗಳಿರುವುದನ್ನು ಖಚಿತಪಡಿಸಿದ್ದಾರೆ. ಅವಶೇಷಗಳಡಿ ಮೂವರ ಮೃತ ದೇಹಗಳು ಇರುವ ಸಾಧ್ಯತೆ ಇದೆ. ಮಣ್ಣು, ಕಲ್ಲನ್ನು ತೆರವು ಮಾಡುವ ಸಲುವಾಗಿ ಯಂತ್ರವನ್ನು ತರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net