ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಕ್ರಮ ವಹಿಸಿ

Take action to control leaf spot disease
Published on

ಶಿರಸಿ: ಶಿರಸಿ-ಸಿದ್ದಾಪುರ ತಾಲೂಕಿನ ರೈತರು ಅಡಕೆಗೆ ಎಲೆಚುಕ್ಕಿ ರೋಗದ ಸಮಸ್ಯೆ ತೀವ್ರ ಕಾಡುತ್ತಿದೆ. ರೈತರು ಇನ್ನಷ್ಟು ಹಾನಿ ಎದುರಿಸುವ ಮುಂಚೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ಎಲೆಚುಕ್ಕಿ ರೋಗದ ನಿಯಂತ್ರಣ ಕುರಿತು ಮತ್ತು ಬೆಳೆ ಸಮೀಕ್ಷೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ಸೆಪ್ಟೆಂಬರ್​ನಿಂದ ಅಡಕೆಗೆ ಎಲೆಚುಕ್ಕಿ ರೋಗದ ಸಮಸ್ಯೆ ಎರಡು ತಾಲೂಕಿನ ರೈತರನ್ನು ಕಾಡುತ್ತಿದೆ. ಕಳೆದ ಮೂರು ವರ್ಷಗಳಿಂದ ಇದು ನಡೆದಿದೆ. ಕಳೆದ ವರ್ಷ ಯಾವ್ಯಾವುದೋ ಕಂಪನಿಗಳು ಇಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದ್ದಾರೆ. ಬೆಳೆಗಾರರು ಸಾವಿರಾರು ರೂ. ವ್ಯಯಿಸಿ ಔಷಧ ಸಿಂಪಡಿಸಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ಎಲೆಚುಕ್ಕಿ ರೋಗದ ಔಷಧ ಉತ್ಪಾದಕರು ಜಿಲ್ಲೆಗೆ ಬಂದು ರೋಗದ ಕುರಿತು ಸಮೀಕ್ಷೆ ನಡೆಸಿದ್ದಾರೆಯೇ. ರೋಗ ಯಾವ ರೀತಿಯದ್ದು ಎಂದು ಪರೀಕ್ಷೆ ಮಾಡಿದ್ದಾರೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಬೇಕು. ವಿಜ್ಞಾನಿಗಳು ತೋಟಕ್ಕೆ ಬರದೇ ಔಷಧ ನೀಡಿದರೆ ಸಮಸ್ಯೆ ನಿವಾರಣೆ ಆಗುವುದಿಲ್ಲ ಎಂದರು.

ಎಲೆಚುಕ್ಕಿ ಮತ್ತು ಕೊಳೆ ರೋಗದಿಂದ ಕಂಗಾಲಾದ ರೈತರು ಪರಿಹಾರಕ್ಕೆ ಆಗ್ರಹಿಸುತ್ತಿದ್ದಾರೆ. ಬೆಳೆ ಹಾನಿ, ಎಲೆಚುಕ್ಕಿ ರೋಗ ಹೆಚ್ಚುತ್ತಿರುವ ವರದಿ ಕೇವಲ ಕಾಗದಪತ್ರಗಳಿಗೆ ಮಾತ್ರ ಸೀಮಿತವಾಗಬಾರದು. ಅಧಿಕಾರಿಗಳು ಪರಿಶೀಲನೆಗೆ ಸ್ಥಳಕ್ಕೆ ತೆರಳಿದ ವೇಳೆ ರೈತರಿಗೆ ಸೂಕ್ತ ಔಷಧೋಪಚಾರದ ಮಾಹಿತಿ ನೀಡಬೇಕು. ಕಳೆದ ವರ್ಷಗಳಲ್ಲಿ ನೀಡಿದ ಔಷಧದಿಂದ ಪರಿಣಾಮ ಎಷ್ಟರ ಮಟ್ಟಿಗೆ ಆಗಿದೆ ಎಂಬುದನ್ನೂ ಗಮನಿಸಬೇಕು. ಅಡಕೆ ಬೆಳೆಗಾರರಿಗೆ ಲಭಿಸುವುದು ವರ್ಷಕ್ಕೆ ಒಂದು ಬೆಳೆ ಮಾತ್ರ. ಅದೂ ಹಾನಿಯಾದರೆ ರೈತನ ಸ್ಥಿತಿ ಗಂಭೀರವಾಗಲಿದೆ. ಆದ್ದರಿಂದ ಈ ಸಮಸ್ಯೆ ಪರಿಹಾರಕ್ಕೆ ಹಾರಿಕೆ ಉತ್ತರ ನಿರೀಕ್ಷಿಸುವುದಿಲ್ಲ. ರೈತರ ಬದುಕಿನಲ್ಲಿ ನೆಮ್ಮದಿ ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.

ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಆಪ್ ಮೂಲಕ ಹಾಗೂ ಗ್ರಾಮಲೆಕ್ಕಿಗರ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ. ಸುಮಾರು 2 ಸಾವಿರ ರೈತರು ಸ್ವತಃ ಸಮೀಕ್ಷೆ ಮಾಡಿಕೊಂಡಿದ್ದಾರೆ. ಇದುವರೆಗೆ ಶೇ. 46ರಷ್ಟು ಬೆಳೆ ಸಮೀಕ್ಷೆ ಮಾಡಲಾಗಿದೆ ಎಂದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಸತೀಶ ಹೆಗಡೆ ಮಾತನಾಡಿ, ಶಿರಸಿ ತಾಲೂಕಿನಲ್ಲಿ 5078 ಹೆಕ್ಟೇರ್ ಪ್ರದೇಶದಲ್ಲಿ ಅಡಕೆಗೆ ಕೊಳೆ ರೋಗ ಬಂದಿದೆ. ಶೇ. 33ಕ್ಕಿಂತ ಹೆಚ್ಚು ಹಾನಿಯಾಗಿದೆ ಎಂದರು.

ಆಗ ಭೀಮಣ್ಣ ನಾಯ್ಕ, ಅಡಕೆ ಬೆಳೆ ಇರುವ ಕ್ಷೇತ್ರಕ್ಕಿಂತ ಸಮೀಕ್ಷೆಯಲ್ಲಿ ಕಡಿಮೆ ದಾಖಲಿಸಲಾಗಿದೆ ಎಂಬ ದೂರು ಬರುತ್ತಿವೆ. ಅಡಕೆಯ ತೋಟಗಳಲ್ಲಿ ಕಾಳುಮೆಣಸು, ಏಲಕ್ಕಿ, ಬಾಳೆ ಬೆಳೆಯುತ್ತಿದ್ದು, ಎಲ್ಲ ನೋಂದಣಿ ಮಾಡಬೇಕು ಎಂದು ಸೂಚಿಸಿದರು.

ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ, ತಹಸೀಲ್ದಾರ್ ಶ್ರೀಧರ ಮುಂದಲಮನಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net