

ಕೊಕ್ಕರ್ಣೆ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಆದಿಸುಬ್ರಹ್ಮಣ್ಯ ದೇವರ ಪುನಃ ಪ್ರತಿಷ್ಠಾಪನಾ ಮಹೋತ್ಸವ ಭಾನುವಾರ ಜರುಗಿತು.
ವಾರ್ಷಿಕೋತ್ಸವ ಅಂಗವಾಗಿ ದೇವಿಗೆ ಬ್ರಹ್ಮಕಲಶಾಭಿಷೇಕ, ಪ್ರಧಾನ ಹೋಮ, ಚಂಡಿಕಾಯಾಗ, ಋಕ್ ಸಂಹಿತಾ ಪಾರಾಯಣ, ಆಶ್ಲೇಷಾ ಬಲಿ ನೆರವೇರಿತು. ಶ್ರೀ ಆದಿಸುಬ್ರಹ್ಮಣ್ಯ ದೇವರ ನೂತನ ಶಿಲಾಮಯ ದೇವಸ್ಥಾನವನ್ನು ಸುಬ್ರಹ್ಮಣ್ಯ ಮಂಜರ ಸವಿನೆನಪಿಗಾಗಿ ದಾನಿಗಳಾದ ಮಾರಣಕಟ್ಟೆ ವಿಶಾಲಾಕ್ಷಿ ಮತ್ತು ಮಕ್ಕಳು, ಮೊಮ್ಮಕ್ಕಳು ಜೀರ್ಣೋದ್ಧಾರಗೊಳಿಸಿ ಪುನಃ ಪ್ರತಿಷ್ಠಾಪನೆಗೊಳಿಸಿ ಲೋಕಾರ್ಪಣೆಗೊಳಿಸಿದರು. ದಾನಿಗಳಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಮತ್ತು ಕುಟುಂಬಸ್ಥರು, ಮಂದಾರ್ತಿ ದೇಗುಲ ಅಧ್ಯಕ್ಷ ಎಚ್.ಧನಂಜಯ ಶೆಟ್ಟಿ, ಮೊಕ್ತೇಸರರು, ಅರ್ಚಕ ವೃಂದ, ಭಕ್ತರು ಉಪಸ್ಥಿತರಿದ್ದರು.