ರಿಪೋರ್ಟ್ ಕಾರ್ಡ್ ಜನರ ಮುಂದಿಡಲಿದ್ದಾರೆ ಸಿಎಂ ಬೊಮ್ಮಾಯಿ‌

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published on

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ ಜತೆಗೆ ಬಸವರಾಜ ಬೊಮ್ಮಾಯಿ‌ ಮುಖ್ಯಮಂತ್ರಿಯಾಗಿ‌ ಗುರುವಾರ ( ನ.4) ನೂರು ದಿನಗಳನ್ನು ಪೂರೈಸುವ‌ ಸಂತಸ ಸೇರಿಕೊಳ್ಳಲಿದೆ. ಈ ಅವಕಾಶವನ್ನು ಬಳಸಿಕೊಂಡು ಜನರ ಮುಂದೆ ರಿಪೋರ್ಟ್ ಕಾರ್ಡ್ ಮಂಡಿಸಲು ಚಿಂತನೆ ನಡೆಸಿದ್ದಾರೆ.

ಹುಬ್ಬಳ್ಳಿಗೆ ತೆರಳುವ ಮುನ್ನ ಬುಧವಾರ ಸುದ್ದಿಗಾರರಿಗೆ‌ ಪ್ರತಿಕ್ರಿಯಿಸಿದ ಅವರು, ಯಾವುದೇ ಒಂದು ಸರ್ಕಾರಕ್ಕೆ 100 ದಿನಗಳು ದೊಡ್ಡದೇನಲ್ಲ. ಆದರೂ ಕಳೆದ 100 ದಿನಗಳಲ್ಲಿ ನಡೆದು ಬಂದ ಹಾದಿ, ದಿಕ್ಸೂಚಿ ಹಾಗೂ ಭರವಸೆ ಈಡೇರಿಸಿದ ಕುರಿತು ಸ್ಥೂಲ ಮಾಹಿತಿಯನ್ನು ಗುರುವಾರ ಜನರ ಮುಂದಿಡುವೆ ಎಂದು ಬೊಮ್ಮಾಯಿ‌ ತಿಳಿಸಿದರು.

ಯಾವುದರ ದಿಕ್ಸೂಚಿ
ಮುಂದಿನ ಚುನಾವಣೆಗೆ ಬದಲಾವಣೆ ದಿಕ್ಸೂಚಿ ಎಂದು ಪ್ರತಿಪಕ್ಷಗಳು ಹೇಳುವುದು ಸಹಜ. ಹಾನಗಲ್ ನಲ್ಲಿ ನಮ್ಮ ಸೋಲು ಬದಲಾವಣೆ ದಿಕ್ಸೂಚಿ ಎಂದು ಕಾಂಗ್ರೆಸ್ ನಾಯಕರು ಹೇಳುವುದಾದರೆ ಸಿಂದಗಿಯಲ್ಲಿ 31000 ಮತಗಳ ಅಂತರದಿಂದ ಸೋತಿದ್ದಾರಲ್ಲ. ಅದು ಯಾವುದರ ದಿಕ್ಸೂಚಿ ಎಂಬುದನ್ನೂ ಹೇಳಬೇಕು ಎಂದು ಬೊಮ್ಮಾಯಿ‌ ಕಾಲೆಳೆದರು.

ಚುನಾವಣೆಗಳಲ್ಲಿ ಸೋಲು-ಗೆಲುವು ಸ್ವಾಭಾವಿಕ. ಅದನ್ನು ಸಮಾನವಾಗಿ ಸ್ವೀಕರಿಸಿದ್ದೇವೆ. ಹಾನಗಲ್ ಬಿಜೆಪಿ ಸೋತ ಕಾರಣಕ್ಕೆ ಸರ್ಕಾರದ ಮೇಲೆ ಯಾವುದೇ ಪರಿಣಾಮಬೀರದು. ಆದರೆ, ಸೋಲಿನ ಬಗ್ಗೆ ಪರಾಮರ್ಶಿಸಿ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಡಿಯಿಡುತ್ತೇವೆ. ಎರಡೂ ಕ್ಷೇತ್ರಗಳಲ್ಲಿ ಜನರು ಬೆಂಬಲಿಸಿದ್ದಾರೆ. ಎಲ್ಲ ನಾಯಕರು ಹಾಗೂ ಕಾರ್ಯಕರ್ತರು ಶ್ರಮಿಸಿದ್ದಾರೆ.

ದಿವಂಗತ ಸಿ.ಎಂ.ಉದಾಸಿ ನಿರ್ಮಿಸಿದ ತಳಹದಿ ಸರಿಯಾಗಿ ಬಳಸಿಕೊಳ್ಳಲಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಅವರು ಕರೊನಾ ಕಷ್ಟ ಕಾಲದಲ್ಲಿ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂಬ ಜನರ ಒಲವು ಪಕ್ಷದ ಹಿನ್ನಡೆಗೆ ಪ್ರಮುಖ ಕಾರಣವೆಂದು ಸಿಎಂ ಬೊಮ್ಮಾಯಿ‌ ವಿಶ್ಲೇಷಿಸಿದರು.

ಹಿರಿಯರ ದಿನದ ನಿಮಿತ್ತ ಹಿರಿಯರ ಸಮಾಧಿಗೆ ಗೌರವ ನಮನ ಸಲ್ಲಿಸಲು ಬೊಮ್ಮಾಯಿ‌ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದ್ದು, ಗುರುವಾರ ದೀಪಾವಳಿ ಹಬ್ಬ ಹಾಗೂ ಶತ ದಿನೋತ್ಸವವನ್ನು ಹುಬ್ಬಳ್ಳಿಯಲ್ಲೇ ಆಚರಿಸಿ, ಶುಕ್ರವಾರ ಬೆಂಗಳೂರಿಗೆ ಮರಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net