ರಟ್ಟಿಹಳ್ಳಿ-ಚಿಕ್ಕಯಡಚಿ ರಸ್ತೆ ಕಾಮಗಾರಿ ಕಳಪೆ

17 rtl 01a
Published on

ರಟ್ಟಿಹಳ್ಳಿ: ತಾಲೂಕಿನ ಅಣಜಿ-ಕೋಡ ಮಾರ್ಗದ ರಟ್ಟಿಹಳ್ಳಿ-ಚಿಕ್ಕಯಡಚಿ ನಡುವಿನ ರಸ್ತೆಗೆ ಹಾಕಿದ ಡಾಂಬರ್ ಒಂದೇ ವಾರದಲ್ಲಿ ಕಿತ್ತು ಹೋಗಿದೆ. ಕಾಮಗಾರಿ ಕಳಪೆಯಾಗಿದ್ದು, ಮರು ಡಾಂಬರೀಕರಣ ಮಾಡಬೇಕು ಹಾಗೂ ಗುತ್ತಿಗೆದಾರರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು, ರಾಜಕೀಯ ಮುಖಂಡರು ಆಗ್ರಹಿಸಿದ್ದಾರೆ.

ರಸ್ತೆ ಕಾಮಗಾರಿ ಕಳಪೆಯಾಗಿರುವುದನ್ನು ಸುದ್ದಿಗಾರರಿಗೆ ತೋರಿಸಿ ಅವರು, ದುರಸ್ತಿಗೆ ಸರ್ಕಾರವನ್ನು ಒತ್ತಾಯಿಸಿದರು.

ಕಾಂಗ್ರೆಸ್​ನ ಮಂಜುನಾಥ ತಂಬಾಕದ ಮಾತನಾಡಿ, ರಟ್ಟಿಹಳ್ಳಿ-ಚಿಕ್ಕಯಡಚಿ ನಡುವಿನ 5 ಕಿಮೀ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಒಟ್ಟು 1 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದ್ದಾರೆ. ರಸ್ತೆಗೆ ಹಾಕಿದ ಡಾಂಬರ್ ಕಿತ್ತು ಬರುತ್ತಿದೆ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ನಿರ್ವಣವಾಗಿವೆ. ಕಾಮಗಾರಿ ಮುಗಿದು ಒಂದೇ ವಾರದಲ್ಲಿ ಇಂತಹ ಪರಿಸ್ಥಿತಿ ನಿರ್ವಣವಾಗಿದೆ. ಸಂಬಂಧಿಸಿದ ಇಲಾಖೆಯವರು ಕೂಡಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಜೆಡಿಎಸ್​ನ ಉಜಿನೆಪ್ಪ ಕೋಡಿಹಳ್ಳಿ ಮಾತನಾಡಿ, ಗುಣಮಟ್ಟದಿಂದ ಕಾಮಗಾರಿ ನಿರ್ವಹಿಸದ ಕಾರಣ ರಸ್ತೆ ಹದಗೆಟ್ಟಿದೆ. ಗುತ್ತಿಗೆದಾರರು ರಸ್ತೆಗೆ ಮರುಡಾಂಬರೀಕರಣ ಮಾಡಬೇಕು. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಕಾಮಗಾರಿಯ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಎಂದರು.

ಸ್ಥಳಕ್ಕಾಗಮಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಎ.ಎಸ್. ಅಂಗಡಿ ಮಾತನಾಡಿ, ಆರೋಗ್ಯ ಸಮಸ್ಯೆಯಿಂದ ಇಲ್ಲಿಯವರೆಗೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿ ರಸ್ತೆ ದುರಸ್ತಿ ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ವರದಿ ಕಳುಹಿಸಲಾಗವುದು ಎಂದು ಹೇಳಿದರು.

ಕಾಂಗ್ರೆಸ್ ಹಾವೇರಿ ಜಿಲ್ಲಾ ವಕ್ತಾರ ವಿನಯ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ಎಪಿಎಂಸಿ ಮಾಜಿ ಅಧ್ಯಕ್ಷ ವಸಂತ ದ್ಯಾವಕ್ಕಳವರ, ರೈತ ಸಂಘಟನೆ ಜಿಲ್ಲಾಧ್ಯಕ್ಷ ಹನುಮಂತಪ್ಪ ದೀವಗಿಹಳ್ಳಿ, ಕರವೇ ಜಿಲ್ಲಾ ಸಂಚಾಲಕ ಯಲ್ಲಪ್ಪ ಮರಾಠೆ, ಪರಮೇಶಪ್ಪ ಕಟ್ಟೇಕಾರ, ಯೂಸೆಫ್ ಸೈಕಲ್ಗಾರ, ಗ್ರಾಮಸ್ಥರಾದ ಉಜ್ಜನಗೌಡ ಸಣ್ಣಗೌಡ್ರ, ಶಂಕರಗೌಡ ಹುಲ್ಲತ್ತಿ, ಎಲ್.ಎಸ್. ಪಾಟೀಲ, ಶಂಭು ಮುತ್ತಗಿ, ಬಸವರಾಜ ಗುಬ್ಬಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net