

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಎಷ್ಟೇ ದೊಡ್ಡ ಧರ್ಮಗುರುವಾಗಿದ್ದರೂ ದೇವನ ದಯೆ ಇಲ್ಲದೆ ಏನೂ ಮಾಡಲಾಗದು. ನಮ್ಮೊಂದಿಗೆ ಯಾರೂ ಕರುಣೆ ತೋರಿಸದಿದ್ದರೂ ದೇವನು ಕರುಣೆ ತೋರಿಸಬೇಕಾದರೆ ಸದಾ ದೇವಸ್ಮರಣೆಯಲ್ಲಿರಬೇಕು. ರಾತೀಬ್ ಕೊಟ್ಟಿಗೆ ಕೇವಲ ಒಂದು ಕಟ್ಟಡವಾಗಿ ಸೀಮಿತಗೊಳಿಸದೆ ದೇವನಾಮ ಸ್ಮರಣೆ ಕೇಂದ್ರವನ್ನಾಗಿಸಬೇಕು ಎಂದು ಸಯ್ಯದ್ ಝೈನುಲ್ ಆಬಿದ್ ಜಿಫ್ರಿ ತಂಙಳ್ ಬೆಳ್ತಂಗಡಿ ಹೇಳಿದರು. ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ 94ನೇ ರಾತೀಬ್ ನೇರ್ಚೆ ಪ್ರಯುಕ್ತ ಮಸೀದಿ ಮುಂಭಾಗದಲ್ಲಿ ನಿರ್ಮಿಸಲಾದ ರಾತೀಬ್ ನೂತನ ಕೊಟ್ಟಿಗೆ, ನೂರೇ ಅಜ್ಮೀರ್ ಆಧ್ಯಾತ್ಮಿಕ ಸಂಗಮ ಉದ್ಘಾಟಿಸಿದರು. ಮೇಲಂಗಡಿ ಮಸೀದಿ ಮಾಜಿ ಅಧ್ಯಕ್ಷ ಫಾರೂಕ್ ಉಳ್ಳಾಲ ಮಾತನಾಡಿ, ಹಿಂದೊಮ್ಮೆ ಸಿಡುಬು ರೋಗ ಬಂದಾಗ ಉಳ್ಳಾಲವನ್ನು ಕೇಂದ್ರವಾಗಿಸಿ ರಾತೀಬ್ ಆರಂಭಿಸಲಾಗಿತ್ತು. ಏಕಾಗ್ರತೆಯಿಂದ ಮಹಾತ್ಮರ ಸ್ಮರಣೆ ಮಾಡಲು ಅಗತ್ಯವಾಗಿದ್ದ ರಾತೀಬ್ ಕೊಟ್ಟಿಗೆ ಮತ್ತೆ ನಿರ್ಮಾಣಗೊಳಿಸಿರುವುದು ಶ್ಲಾಘನೀಯ ಎಂದರು. ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನೂರೇ ಮಜ್ಲೀಸ್ ಆಧ್ಯಾತ್ಮಿಕ ಸಂಗಮ ನಡೆಯಿತು. ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಅಬ್ದುಲ್ ರಶೀದ್, ಯು.ಎಸ್.ಹಂಝ, ಮಾಜಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತ್ವಾಹಾ, ನಗರಸಭೆ ಸದಸ್ಯ ಅಬ್ದುಲ್ ಜಬ್ಬಾರ್, ಸಂಶುಲ್ ಉಲಮಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಯು.ಟಿ.ಮೊಹಮ್ಮದ್, ಲೋಕೋಪಯೋಗಿ ಗುತ್ತಿಗೆದಾರ ಯು.ಕೆ.ಯೂಸುಫ್, ದರ್ಗಾ ಸದಸ್ಯ ಇಸ್ಹಾಕ್, ಮೇಲಂಗಡಿ ಮಸೀದಿ ಮಾಜಿ ಅಧ್ಯಕ್ಷ ಝೈನುದ್ದೀನ್ ಸೀದಿಯಬ್ಬ ಮತ್ತಿತರರು ಉಪಸ್ಥಿತರಿದ್ದರು. ಮೇಲಂಗಡಿ ಜುಮಾ ಮಸೀದಿ ಅಧ್ಯಕ್ಷ ಮುಸ್ತಫಾ ಅಬ್ದುಲ್ಲಾ ಸ್ವಾಗತಿಸಿದರು.
25 ವರ್ಷಗಳ ಹಿಂದೆ 28 ಮೊಹಲ್ಲಾ, 5 ಕರಿಯಾದಲ್ಲಿ ಮೇಲಂಗಡಿಯಲ್ಲಿದ್ದ ಏಕೈಕ ರಾತೀಬ್ ಕೊಟ್ಟಿಗೆ ಹಲವು ವರ್ಷಗಳ ಬಳಿಕ ಮರುನಿರ್ಮಾಣಗೊಳ್ಳುವ ಮೂಲಕ ನಮ್ಮನ್ನು ಗತಕಾಲಕ್ಕೆ ಕೊಂಡೊಯ್ದಿದೆ. ಅಂದಿನ ದಿನಗಳಲ್ಲಿ ಪ್ರತಿಯೊಬ್ಬರಲ್ಲಿದ್ದ ಪ್ರೀತಿ, ವಿಶ್ವಾಸದ ವಾತಾವರಣ ಮರುಕಳಿಸಬೇಕಿದೆ. ಬಿ.ಜಿ.ಹನೀಫ್, ಅಧ್ಯಕ್ಷ, ಉಳ್ಳಾಲ ದರ್ಗಾ