ಸರ್ಕಾರಿ ಶಾಲೆಯಲ್ಲಿಲ್ಲ ಕೊಠಡಿ

rathabeedi
Published on

ರಾಘವೇಂದ್ರ ಪೈ ಗಂಗೊಳ್ಳಿ

ಗಂಗೊಳ್ಳಿ ಗ್ರಾಮದ ರಥಬೀದಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠ ಪ್ರವಚನ ಮಾಡಲು ತರಗತಿ ಕೋಣೆಗಳಿಲ್ಲದೆ ಅಂಗನವಾಡಿ ವರಾಂಡ ಮತ್ತು ರಂಗ ಮಂದಿರವನ್ನು ಆಶ್ರಯಿಸಬೇಕಾಗಿದೆ.

ಒಂದರಿಂದ 5ನೇ ತರಗತಿವರೆಗೆ 46 ವಿದ್ಯಾರ್ಥಿಗಳು ಶಾಲೆಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದು, ಇಬ್ಬರು ಶಿಕ್ಷಕಿಯರು, ಓರ್ವ ಗೌರವ ಶಿಕ್ಷಕಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆಯಲ್ಲಿನ ಎರಡು ತರಗತಿ ಕೋಣೆ ಗೋಡೆಗಳಲ್ಲಿ ಬಿರುಕು ಕಂಡುಬಂದ ಹಿನ್ನೆಲೆಯಲ್ಲಿ ಹೊಸ ತರಗತಿ ಕೊಠಡಿಗಳನ್ನು ಮಂಜೂರು ಮಾಡುವಂತೆ, ಶಿಥಿಲಾವಸ್ಥೆಯಲ್ಲಿರುವ ತರಗತಿ ಕೊಠಡಿಗಳನ್ನು ತೆರವುಗೊಳಿಸುವಂತೆ ಎಸ್‌ಡಿಎಂಸಿ ಹಾಗೂ ಸ್ಥಳೀಯಾಡಳಿತ ಮನವಿ ಮಾಡಿತ್ತು.

ಹೊಸ ತರಗತಿ ಕೋಣೆ ನಿರ್ಮಾಣಕ್ಕೆ ಅನುದಾನ ಮೀಸಲಿಡದೆ ಎರಡು ತರಗತಿ ಕೊಠಡಿ ಮಂಜೂರು ಮಾಡುವ ಭರವಸೆ ನೀಡಿದ್ದ ಶಿಕ್ಷಣ ಇಲಾಖಾಧಿಕಾರಿಗಳು, ಎರಡು ಕೊಠಡಿಗಳನ್ನು ನೆಲಸಮ ಮಾಡಿ ಏಳು ತಿಂಗಳು ಕಳೆದಿದ್ದರೂ ಹೊಸ ತರಗತಿ ಕೋಣೆ ನಿರ್ಮಿಸಲು ಕ್ರಮ ಕೈಗೊಳ್ಳದಿರುವುದು ಆತಂಕಕ್ಕೆ ಕಾರಣವಾಗಿದೆ.

ಗಂಗೊಳ್ಳಿ ರಥಬೀದಿಯಲ್ಲಿ 1942ರಲ್ಲಿ ಸ್ಥಾಪನೆಯಾಗಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾಲಕ್ರಮೇಣ ಗಂಗೊಳ್ಳಿ ಖಾರ್ವಿಕೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದಿಗೆ ವಿಲೀನಗೊಂಡಿತ್ತು. ಬಳಿಕ 1999ರಲ್ಲಿ ಗಂಗೊಳ್ಳಿಯ ಮೀನು ಮಾರುಕಟ್ಟೆ ಸಮೀಪದ ಸರ್ಕಾರಿ ಸ್ಥಳದಲ್ಲಿ ಶಾಲೆ ಪುನರಾರಂಭಗೊಂಡಿತ್ತು. 1999ರಲ್ಲಿ ಎರಡು ತರಗತಿ ಕೋಣೆಗಳಲ್ಲಿ ಶಾಲೆ ನಡೆಸಲಾಗುತ್ತಿತ್ತು. ಬಳಿಕ ಸರ್ವಶಿಕ್ಷಣ ಅಭಿಯಾನದಡಿ ಒಂದು ತರಗತಿ ಕೋಣೆ ನಿರ್ಮಿಸಲಾಗಿತ್ತು.

ಪಾಠ ಪ್ರವಚನಕ್ಕೆ ಕೊಠಡಿಗಳ ಅಭಾವ

ಶಾಲೆಯಲ್ಲಿದ್ದ ಮೂರು ತರಗತಿ ಕೋಣೆಗಳ ಪೈಕಿ ಎರಡು ಕೋಣೆಗಳನ್ನು ನೆಲಸಮ ಮಾಡಲಾಗಿದ್ದು, ಒಂದು ತರಗತಿ ಕೋಣೆ ಮಾತ್ರ ಇದೆ. ಹೀಗಾಗಿ ಮಕ್ಕಳಿಗೆ ಪಾಠ ಪ್ರವಚನ ನಡೆಸಲು ಕೊಠಡಿಗಳ ಅಭಾವ ಕಾಡಲಾರಂಭಿಸಿದೆ. ಒಂದರಿಂದ 3ನೇ ತರಗತಿವರೆಗೆ ರಂಗ ಮಂದಿರದಲ್ಲಿ, 4ನೇ ತರಗತಿ ಸಮೀಪದ ಅಂಗನವಾಡಿ ವರಾಂಡದಲ್ಲಿ, 5ನೇ ತರಗತಿ ಶಾಲಾ ಕಚೇರಿಯಲ್ಲಿ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಶಾಲೆ ಮಕ್ಕಳ ಪರಿಸ್ಥಿತಿ ಹೇಳತೀರದು.

ಶಾಲಾ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿಲ್ಲ. ಗಂಗೊಳ್ಳಿ ರಥಬೀದಿ ಶಾಲೆಯಲ್ಲಿ ತುರ್ತು ತರಗತಿ ಕೋಣೆ ನಿರ್ಮಾಣಕ್ಕೆ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆಗೊಂಡ ಬಳಿಕ ಪ್ರಥಮ ಆದ್ಯತೆಯಲ್ಲಿ ತರಗತಿ ಕೋಣೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net