

ರಟಕಲ್ ವಿರಕ್ತ ಮಠದ ಪೀಠಾಧಿಪತಿ ಲಿಂಗೈಕ್ಯ | ಮುಗಿಲು ಮುಟ್ಟಿದ ಭಕ್ತರ ಆಕ್ರಂಧನ
ವಿಜಯವಾಣಿ ಸುದ್ದಿಜಾಲ ಕಾಳಗಿ
ನಗುಮೊಗದ ಗುರುಗಳು, ಖ್ಯಾತ ವಾಗ್ಮಿ ಹಾಗೂ ಅಸಂಖ್ಯಾತ ಭಕ್ತರ ಆರಾಧ್ಯ ದೈವ ರಟಕಲ್‌ನ ಮುರುಘೇಂದ್ರ ಶಿವಯೋಗಿಗಳ ವಿರಕ್ತ ಮಠದ (ದೊಡ್ಡ ಮಠ) ಪೀಠಾಧಿಪತಿ ಶ್ರೀ ಸಿದ್ಧರಾಮ ಸ್ವಾಮಿಗಳು (೩೫) ಸೋಮವಾರ ಲಿಂಗೈಕ್ಯರಾದರು.
ಗ್ರಾಮದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ವಚನ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರವಚನ ನೀಡಿದ್ದರು. ಬಳಿಕ ಶ್ರೀಮಠದ ಕೋಣೆಯಲ್ಲಿ ಮಲಗಿಕೊಂಡಿದ್ದು, ಬೆಳಗ್ಗೆ ೫ ಗಂಟೆಗೆ ಎಚ್ಚರಿಸುವಂತೆ ಆಪ್ತನಿಗೆ ಹೇಳಿದ್ದಾರೆ. ಬೆಳಗ್ಗೆ ಸಾಕಷ್ಟು ಬಾರಿ ಬಾಗಿಲು ಬಡೆದರು ಗುರುಗಳು ಎಚ್ಚರವಾಗಲಿಲ್ಲ. ಹೀಗಾಗಿ ಕೋಣೆಯಲ್ಲಿ ಹೋಗಿ ನೋಡಿದಾಗ ಶಿವೈಕ್ಯರಾಗಿದ್ದರು.
ಶ್ರೀ ಸಿದ್ಧರಾಮ ಸ್ವಾಮೀಜಿ ಮೂಲತಃ ಬೆಳಗಾವಿ ಜಿ¯್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದವರಾಗಿದ್ದಾರೆ. ೧೯೮೯ರ ಜು.೩೧ರಂದು ಸೋಮಯ್ಯ ಹಿರೇಮಠ ಹಾಗೂ ಕಾಂತಮ್ಮ ಹಿರೇಮಠ ದಂಪತಿ ಉದರದಲ್ಲಿ ಜನಿಸಿದರು. ಪೂರ್ವಾಶ್ರಮದ ಹೆಸರು ಸಿದ್ಧರಾಮ ಆಗಿದ್ದು, ಸ್ವಗ್ರಾಮ ಕೊಕಟನೂರಿನಲ್ಲಿ ಪ್ರಾಥಮಿಕ ಹಾಗೂ ಶಿವಯೋಗ ಮಂದಿರದಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಶಿಕ್ಷಣ ಸಂಸ್ಥೆಯಲ್ಲಿ ಬಿಎ ಹಾಗೂ ಎಂಎ (ಸಂಸ್ಕೃತ) ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ.
೨೦೧೫ರಲ್ಲಿ ರಟಕಲ್‌ನ ಶ್ರೀ ಮುರುಘೇಂದ್ರ ಶಿವಯೋಗಿಗಳ ವಿರಕ್ತ ಮಠಕ್ಕೆ ಸಿದ್ಧರಾಮರನ್ನು ಉತ್ತರಾಧಿಕಾರಿಯಾಗಿ ನೇಮಿಸಿ, ಶ್ರೀ ಸಿದ್ಧರಾಮ ದೇವರು ಎಂದು ಹೆಸರಿಡಲಾಯಿತು. ೨೬ನೇ ವಯಸ್ಸಿಗೆ ಶ್ರೀಮಠದ ಅಭಿವೃದ್ಧಿಗೆ ಶ್ರಮಿಸಿದ್ದರು. ೨೦೧೭ರ ಏ.೯ರಂದು ಹಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ ಪಟ್ಟಾಧಿಕಾರ ನೆರವೇರಿಸಿ, ಶ್ರೀ ಸಿದ್ಧರಾಮ ಸ್ವಾಮೀಜಿ ಎಂದು ನಾಮ ಅಭಿದಾನ ಮಾಡಲಾಯಿತು.
ಪೀಠಾಧಿಪತಿ ಆದ ಬಳಿಕ ಜಿ¯್ಲÉ ಸೇರಿ ವಿವಿಧೆಡೆ ಪ್ರವಚನಗಳ ಮೂಲಕ ಶರಣ ಧರ್ಮ ಪ್ರಸಾರ ಮಾಡಿದ್ದಾರೆ. ದಾಸೋಹ, ಧಾರ್ಮಿಕ, ಸ್ವಚ್ಛತಾ ಅರಿವು, ರಕ್ತದಾನ ಶಿಬಿರ, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದರು.
ಶ್ರೀಮಠದಲ್ಲೇ ಅಂತಿಮ ವಿಧಿ-ವಿಧಾನ
ಶ್ರೀ ಸಿದ್ಧರಾಮ ಸ್ವಾಮಿಗಳ ಪಾರ್ಥಿವ ಶರೀರವನ್ನು ಸಂಜೆವರೆಗೂ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಅಪಾರ ಭಕ್ತರು ನೆಚ್ಚಿನ ಗುರುಗಳ ಅಂತಿಮ ದರ್ಶನ ಪಡೆದು, ಕಣ್ಣೀರ ವಿಧಾಯ ಹೇಳಿದರು. ಬಳಿಕ ಹುಲಸೂರು ಹಾಗೂ ಭರತನೂರು ಶ್ರೀಗಳ ನೇತೃತ್ವದಲ್ಲಿ ವಿರಕ್ತ ಮಠದ ಆವರಣದಲ್ಲೇ ವಿರಕ್ತ ಪರಂಪರೆಯAತೆ ಶ್ರೀಗಳ ಅಂತಿಮ ವಿಧಿ-ವಿಧಾನಗಳು ನೆರವೇರಿದರು.