ಕಾಡನಕುಪ್ಪೆಯಲ್ಲಿ ಅಪರೂಪದ ತುಷಾರ್ ರೇಷ್ಮೆ ಹುಳು ಪತ್ತೆ

Kailancha-Ph-0003-Thusar Silk Hulu Patthe Story Kadanakuppe -Gudu-Hulu-14-10-2023
Published on

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಕಾಣಸಿಗುವ ತುಷಾರ್ ರೇಷ್ಮೆಹುಳು ರಾಮನಗರ ಜಿಲ್ಲೆಯ ಕಾಡನಕುಪ್ಪೆ ಗ್ರಾಮದಲ್ಲಿ ಕಂಡುಬಂದಿದ್ದು, ಅಚ್ಚರಿಗೆ ಕಾರಣವಾಗಿದೆ.

ಗ್ರಾಮದ ಬಸ್ ನಿಲ್ದಾಣದ ಬಳಿಯ ರಸ್ತೆ ಪಕ್ಕದಲ್ಲಿರುವ ಕಾಡು ಬಾದಾಮಿ ಮರದಲ್ಲಿ ಹಸಿರು ಬಣ್ಣದ ದಪ್ಪನಾದ ಹುಳುಗಳು ಕಂಡುಬಂದಿವೆ. ಈ ಹುಳುಗಳು ಮರದ ಸೊಪ್ಪು ತಿಂದು ಎಲೆಗಳಲ್ಲಿ ಗೂಡು ಕಟ್ಟಿವೆ. ಒಂದೇ ಮರದಲ್ಲಿ ಸೇರಿಕೊಂಡಿರುವ ಇವು ಮರದ ಎಲೆಗಳನ್ನು ಸಂಪೂರ್ಣ ತಿಂದು ಹಾಕಿವೆ.

ಮರದಲ್ಲಿ ಎಲೆಗಳು ವಿರಳವಾಗಿ ಹಸಿರು ಬಣ್ಣದ ದಪ್ಪ ಹುಳುಗಳನ್ನು ನೋಡಿದ ಗ್ರಾಮಸ್ಥರು ಯಾವುದೋ ಅಪಾಯಕಾರಿ ಕೀಟ ಇರಬಹುದು.

ಇದು ಇತರೆಡೆಗೂ ಹರಡಿ ಫಸಲು ನಾಶ ಮಾಡುವ ಕೀಟವೋ ಅಥವಾ ಮುಟ್ಟಿದರೆ ಹಾನಿಕಾರಕವೋ ಎಂದು ಹೆದರಿದ್ದರು. ನಂತರ ಹೊರ ರಾಜ್ಯದಲ್ಲಿ ಉದ್ಯೋಗದಲ್ಲಿರುವ ಗ್ರಾಮದ ಕುಮಾರ್ ಎಂಬುವರು ಶುಕ್ರವಾರ ಗ್ರಾಮಕ್ಕೆ ಬಂದಿದ್ದಾಗ ಇದು ಉತ್ತರ ಭಾರತದಲ್ಲಿ ಕಂಡುಬರುವ ರೇಷ್ಮೆಹುಳು, ಗುಡ್ಡಗಾಡು ಪ್ರದೇಶ, ಅರಣ್ಯದಲ್ಲಷ್ಟೇ ಕಂಡುಬರುತ್ತದೆ. ಇದರಿಂದ ಹಾನಿಯಿಲ್ಲ ಎಂದು ತಿಳಿಸಿದ ನಂತರ ಗ್ರಾಮಸ್ಥರ ಆತಂಕ ದೂರವಾಗಿದೆ.

ಗುಡ್ಡಗಾಡು ಜನರ ಕೃಷಿ

ಈ ಹುಳುಗಳು ಸ್ಥಳೀಯವಾಗಿ ಬೆಳೆಯುವ ಹಿಪ್ಪುನೇರಳೆ ಸೊಪ್ಪು ತಿನ್ನುವುದಿಲ್ಲ. ಬದಲಾಗಿ ಕಾಡುಗಳಲ್ಲಿ ಬೆಳೆಯುವ ಬಾದಾಮಿ, ಅರ್ಜುನ, ಆಸನ್, ಬೆರ್, ಸಾಲ್, ಜಾಮ್, ಸಿಧಾ ಮರದ ಸೊಪ್ಪನ್ನು ಮಾತ್ರ ತಿನ್ನುತ್ತವೆೆ. ಇದನ್ನು ‘ವನ್ಯ ರೇಷ್ಮೆ’ ಎಂದೂ ಕರೆಯುತ್ತಾರೆ. ಹೆಚ್ಚಾಗಿ ಉತ್ತರ ಭಾರತದಲ್ಲಿ ಆದಿವಾಸಿ ಗುಡ್ಡಗಾಡು ಜನರು ಈ ಹುಳುಗಳಿಂದ ರೇಷ್ಮೆ ಕೃಷಿ ಮಾಡುತ್ತಾರೆ. ತೆಗೆ ರಾಂಚಿಯಲ್ಲಿ ತುಷಾರ್ ರೇಷ್ಮೆಯ ಸಂಶೋಧನಾ ಕೇಂದ್ರ ಕೂಡ ಇದೆೆ.

2022-23ರಲ್ಲಿ 1318 ಟನ್ ಉತ್ಪಾದನೆ

ಈ ತಳಿ ರೇಷ್ಮೆ ಹುಳುಗಳು ಚೀನಾ, ಶ್ರೀಲಂಕಾ ಮತ್ತು ಉತ್ತರ ಭಾರತದ ಜಾರ್ಖಂಡ್, ಛತ್ತೀಸ್‌ಗಢ, ಒಡಿಶಾ, ಪಶ್ಚಿಮ ಬಂಗಾಲ ಹಾಗೂ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ರಾಜ್ಯದಲ್ಲೂ ಕಂಡುಬರುತ್ತವೆ. 2022-23ನೇ ಸಾಲಿನಲ್ಲಿ ದೇಶದ ಒಟ್ಟಾರೆ ರೇಷ್ಮೆ ಉತ್ಪಾದನೆಯಲ್ಲಿ ತುಷಾರ್ ರೇಷ್ಮೆ ಕೊಡುಗೆ 1318 ಮೆಟ್ರಿಕ್ ಟನ್. ಕಳೆದ ವರ್ಷದ ಒಟ್ಟು ಉತ್ಪಾದನೆಯಲ್ಲಿ ಸುಮಾರು ಒಂದು ಸಾವಿರ ಮೆಟ್ರಿಕ್ ಅನ್ನೂ ಈ ರಾಜ್ಯಗಳೇ ಉತ್ಪಾದನೆ ಮಾಡಿವೆ.

ಅಚ್ಚರಿ

ತುಷಾರ್ ರೇಷ್ಮೆ ಹುಳು ಉತ್ತರ ಭಾರತದಿಂದ ಕಾಡನಕುಪ್ಪೆಗೆ ಹೇಗೆ ಬಂದಿದೆ ಎಂಬುದೇ ಅಚ್ಚರಿ ಸಂಗತಿಯಾಗಿದೆ. ಅದರಲ್ಲೂ ಈ ಭಾಗದಲ್ಲಿ ಇಂತಹ ಹುಳುಗಳನ್ನು ರೈತರು ಇದುವರೆಗೂ ಕಂಡಿರಲಿಲ್ಲ. ಗ್ರಾಮದ ಆಸುಪಾಸಿನಲ್ಲಿ ತೆಂಗಿನಕಲ್ಲು ಅರಣ್ಯ ಇದ್ದರೂ ಇಂತಹ ಹುಳುಗಳು ಕಂಡಿಲ್ಲ ಎನ್ನುತ್ತಾರೆ ಸ್ಥಳೀಯ ರೈತ ಸಂತೋಷ್.

ರೇಷ್ಮೆ ಜಾತಿ ಹುಳು

ಈ ಹುಳುಗಳು ಮಲಬಾರ್ ರೇಷ್ಮೆ ತಳಿಯಂತೆ ಕಂಡುಬರುತ್ತವೆ. ಆದರೆ ನಮ್ಮಲ್ಲಿನ ರೇಷ್ಮೆ ಹುಳು 30 ದಿನಗಳಲ್ಲಿ ಜೀವನ ಚಕ್ರ ಮುಗಿಸಿದರೆ, ಇದು ಬೇಸಿಗೆಯಲ್ಲಿ 30ರಿಂದ 35 ದಿನಗಳು, ಚಳಿಗಾಲದಲ್ಲಿ 60ರಿಂದ 65 ದಿನಗಳಲ್ಲಿ ಜೀವನ ಚಕ್ರ ಮುಗಿಸುತ್ತವೆ.

ರೇಷ್ಮೆ ನೂಲು ತೆಗೆಯುವುದು ಕಷ್ಟ

ಸ್ಥಳೀಯವಾಗಿ ಬೆಳೆಯುವ ರೇಷ್ಮೆಗೂಡುಗಳಲ್ಲಿ ಬಹಳ ಕಡಿಮೆ ಅವಧಿಯಲ್ಲಿ ರೇಷ್ಮೆ ಬಿಚ್ಚಾಣಿಕೆ ಮಾಡಬಹುದು. ಆದರೆ, ತುಷಾರ್ ರೇಷ್ಮೆ ನೂಲು ಗಟ್ಟಿಯಾಗಿದ್ದು, ತೆಗೆ ಗೂಡು ಬಿಚ್ಚಾಣಿಕೆ ಕೂಡ ಕಷ್ಟ. ಶೇ.5ರಷ್ಟು ಸೋಡಾ ಹಾಕಿ ಬಿಸಿ ನೀರಿನಲ್ಲಿ ನೆನೆಸಿ, ಎರಡೂವರೆ ಗಂಟೆ ಬೇಯಿಸಿ 24 ಗಂಟೆ ನಂತರ ರೇಷ್ಮೆ ಬಿಚ್ಚಾಣಿಕೆ ಮಾಡಬೇಕು ಎನ್ನುತ್ತಾರೆ ವಿಜ್ಞಾನಿಗಳು.

ಚಿಟ್ಟೆ

ಗೂಡಿನಿಂದ ಹೊರಬಂದ ಚಿಟ್ಟೆ ಮರದಿಂದ ಮರಕ್ಕೆ ಹಾರಿ ಸಂತಾನೋತ್ಪತ್ತಿ ನಡೆಸಿ ಮೊಟ್ಟೆ ಇಡುತ್ತದೆ. ಮೊಟ್ಟೆಗಳು ಮರಿಗಳಾಗಿ ನಂತರ ಕಾಡು ಬಾದಾಮಿ ಮರದಲ್ಲಿ ಜೀವನ ಚಕ್ರ ನಡೆಸುತ್ತವೆ.

ಕಾಡನಕುಪ್ಪೆಯಲ್ಲಿ ಕಂಡುಬಂದಿರುವ ಹುಳು ಯಾವುದೇ ಕೀಟವಲ್ಲ, ಹಾನಿಕಾರಕವೂ ಅಲ್ಲ. ಇದು ವಿರಳವಾಗಿ ಅರಣ್ಯದಲ್ಲಷ್ಟೇ ಕಂಡು ಬರುತ್ತದೆ. ನಮ್ಮ ಭಾಗದಲ್ಲಿ ಅಪರೂಪ. ಇದು ಉತ್ತರ ಭಾರತದ ಗುಡ್ಡಗಾಡು ಪ್ರದೇಶದಲ್ಲಿ ಅಲ್ಲಿನ ಜನರು ಬೆಳೆಯುವ ತುಷಾರ್ ರೇಷ್ಮೆ.

ಡಾ. ಬಿ.ಎಸ್. ರಾಜೇಂದ್ರಪ್ರಸಾದ್, ವಿಜ್ಞಾನಿ, ಕೆವಿಕೆ, ರಾಮನಗರ

ಹುಳುವಿನ ಗಾತ್ರ ನೋಡಿ ಹೆದರಿಕೆ ಆಗಿತ್ತು. ಗ್ರಾಮದವರೊಬ್ಬರು ಹುಳುವಿನ ಬಗ್ಗೆ ತಿಳಿಸಿದ ನಂತರ ಆತಂಕ ದೂರವಾಯಿತು. ಆದರೆ ಒಂದು ಮರದಲ್ಲಿದ್ದ ಹುಳುಗಳು ಈಗ ಮೂರು ಮರಕ್ಕೆ ವ್ಯಾಪಿಸಿವೆ. ಹಾನಿಕಾರಕ ಆಗದಿದ್ದರೆ ಸಾಕು.

ಸತೀಶ್, ಕಾಡನಕುಪ್ಪೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net