

ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್, ಸತತ ಐದು ಬಾರಿ ಲೋಕಸಭಾ ಸದಸ್ಯರಾಗಿ, ನಾಲ್ಕು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದವರು. ರಾಜಕಾರಣದಾಚೆಗೂ ವ್ಯಕ್ತಿತ್ವ ವಿಸ್ತರಿಸಿಕೊಂಡ ವಿಶಿಷ್ಟ ನಾಯಕ. ಉಡುಪಿಯ ಸೇಂಟ್ ಸಿಸಿಲಿಯಾಸ್ ಕಾನ್ವೆಂಟ್, ಬೋರ್ಡ್ ಹೈಸ್ಕೂಲ್ ಮತ್ತು ಎಂಜಿಎಂ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಆಸ್ಕರ್, ಕೆಲ ಕಾಲ ಎಲ್ಐಸಿ ಉದ್ಯೋಗಿಯಾಗಿದ್ದರು. ಬಳಿಕ ರಾಜೀನಾಮೆ ನೀಡಿ ಯುವ ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶಿಸಿ 1972ರಲ್ಲಿ ಉಡುಪಿ ಮುನ್ಸಿಪಾಲಿಟಿ ಸದಸ್ಯರಾದರು. ಇದೇ ಅವಧಿಯಲ್ಲಿ ಸಾಮಾಜಿಕವಾಗಿ ಗುರುತಿಸಿಕೊಂಡು ರಿಕ್ಷಾ ಯೂನಿಯನ್ ಅಧ್ಯಕ್ಷರಾಗಿ ಜನಪ್ರಿಯರಾದರು. 1980ರ ಲೋಕಸಭಾ ಚುನಾವಣೆಯಲ್ಲಿ ಉಡುಪಿ ಕ್ಷೇತ್ರದಿಂದ ಆಸ್ಕರ್ ಅವರಿಗೆ ಸ್ಪರ್ಧಿಸುವ ಅವಕಾಶ ಲಭಿಸಿತು. ಜನತಾ ಪಾರ್ಟಿಯ ಡಾ. ವಿ.ಎಸ್.ಆಚಾರ್ಯ ವಿರುದ್ಧ 1.59 ಲಕ್ಷ ಮತಗಳ ಅಂತರದಿಂದ ಗೆದ್ದು ಪ್ರಥಮ ಬಾರಿಗೆ ಸಂಸದರಾದರು. 5 ಬಾರಿ ಸಂಸದರಾಗಿ ಚುನಾಯಿತರಾದ ಅವರಿಗೆ ಬಳಿಕ ಸತತವಾಗಿ ಕೊನೆಯವರೆಗೂ ರಾಜ್ಯಸಭೆ ಪ್ರವೇಶಿಸುವ ವಿರಳ ಅವಕಾಶ ದಕ್ಕಿತು. ರಾಜ್ಯಸಭಾ ಟಿಕೆಟ್ಗೆ ಕಾಂಗ್ರೆಸ್ನಲ್ಲಿ ಎಷ್ಟೇ ಸ್ಪರ್ಧೆ ಇದ್ದರೂ, ಪ್ರತಿ ಬಾರಿ ಹೈಕಮಾಂಡ್ನ ಪ್ರಥಮ ಆದ್ಯತೆಯ ಅಭ್ಯರ್ಥಿ ಆಸ್ಕರ್ ಆಗಿದ್ದರು.
ಹಲವು ಸ್ಥಾನ-ಮಾನ: ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಆಸ್ಕರ್ 1985ರಲ್ಲಿ ಸಂಸದೀಯ ಕಾರ್ಯದರ್ಶಿ ಆಗಿದ್ದರು. ಕೆಪಿಸಿಸಿ ಅಧ್ಯಕ್ಷ, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸದಸ್ಯರೂ ಆಗಿದ್ದರು. ಯುಪಿಎ ಸರ್ಕಾರದಲ್ಲಿ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ರಾಜ್ಯ ಸಚಿವ, ಕಾರ್ವಿುಕ ಖಾತೆ ರಾಜ್ಯ ಸಚಿವ, ಭೂ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ, ಕಾರ್ವಿುಕ ಹಾಗೂ ಉದ್ಯೋಗ ಖಾತೆ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಗೋಮೂತ್ರ ಸೇವನೆ ಪ್ರಸ್ತಾವ: ನಿಯಮಿತವಾಗಿ ಗೋಮೂತ್ರ ಸೇವನೆಯಿಂದ ಕ್ಯಾನ್ಸರ್ ಕಾಯಿಲೆ ಗುಣಪಡಿಸಬಹುದು ಎಂದು ರಾಜ್ಯಸಭೆಯಲ್ಲಿ ಆಸ್ಕರ್ ಫರ್ನಾಂಡಿಸ್ ವ್ಯಕ್ತಪಡಿಸಿದ ಅನಿಸಿಕೆ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಮೀರತ್ನಲ್ಲಿ ಆಶ್ರಮವೊಂದಕ್ಕೆ ಭೇಟಿ ನೀಡಿದ್ದಾಗ ಅಲ್ಲಿನವರೊಬ್ಬರು ತಾವು ಗೋವಿನ ಮೂತ್ರದ ನಿಯಮಿತ ಸೇವನೆಯಿಂದ ಕ್ಯಾನ್ಸರ್ನಿಂದ ಗುಣ ಹೊಂದಿದ್ದಾಗಿ ತಿಳಿಸಿದ್ದರು. ಅನೇಕ ರೋಗಗಳಿಗೆ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಉತ್ತರವಿದೆ ಎಂಬುದು ಆಸ್ಕರ್ ಪ್ರತಿಪಾದನೆಯಾಗಿತ್ತು.
ಸರಳ, ಸಜ್ಜನಿಕೆಯಿಂದ ಜನಮನ ಗೆದ್ದ ಆಸ್ಕರ್ ಪಕ್ಷದಲ್ಲಿ ಹೈಕಮಾಂಡ್ನಿಷ್ಠ ನಾಯಕರಾಗಿದ್ದರು. ಸ್ಥಾನಮಾನಕ್ಕಾಗಿ ಗುಂಪುಗಾರಿಕೆ ಮಾಡದೆ, ಹೈಕಮಾಂಡ್ ನೀಡಿದ ಹುದ್ದೆಯನ್ನು ನಿಭಾಯಿಸಿದವರು. ಜನಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದರು. ರಾಜಕೀಯ ಹೇಳಿಕೆಗಳಲ್ಲಿ ಸಭ್ಯತೆಯ ಗೆರೆ ಇತ್ತು. ರಾಜೀವ್ ಗಾಂಧಿ ಕಾಲದಿಂದಲೇ ನೆಹರು ಕುಟುಂಬಕ್ಕೆ ಹತ್ತಿರವಾಗಿದ್ದವರು ಆಸ್ಕರ್. ರಾಜೀವ್ ಪ್ರಧಾನಿಯಾಗಿದ್ದಾಗ ಸಂಸದೀಯ ಕಾರ್ಯದರ್ಶಿಯಾಗಿದ್ದರು. ನಂತರ ಸೋನಿಯಾ ಗಾಂಧಿ ಆಪ್ತವಲಯದಲ್ಲೂ ಸ್ಥಾನ ಪಡೆದರು. ಅದು ಎಲ್ಲಿಯವರೆಗೆ ಅಂದರೆ, ಸೋನಿಯಾರನ್ನು ನೇರವಾಗಿ ಭೇಟಿಯಾಗಲು ಸಾಧ್ಯವಾಗದವರು ಆಸ್ಕರ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರೆ ಆ ಕೆಲಸ ಆದಂತೆಯೇ ಎಂಬಷ್ಟು. ಆಸ್ಕರ್, ಕಾರ್ವಿುಕ, ಸಾರಿಗೆ ಕೇಂದ್ರ ಸಚಿವರಾಗಿದ್ದಾಗ ತಡರಾತ್ರಿ 2-3 ಗಂಟೆವರೆಗೆ ಕೆಲಸ ಮಾಡುತ್ತಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಟ್ಟಡದ ಪಕ್ಕದಲ್ಲಿರುವ ಸಾರಿಗೆ ಸಚಿವಾಲಯಕ್ಕೆ ಅಧಿಕಾರಿಗಳು ಕೂಡ ಮಧ್ಯರಾತ್ರಿ ಬಂದು ಆಸ್ಕರ್ ಜತೆಗೆ ಕೆಲಸ ಮಾಡುತ್ತಿದ್ದರು. ಪಕ್ಷದ ಕಚೇರಿ ಅಥವಾ ಮನೆಯಲ್ಲಿ ಜನರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದಾಗ ನೇರ ಸರ್ಕಾರಿ ಕಚೇರಿಗೆ ಕರೆಸಿ ಮಾತನಾಡಿಸುತ್ತಿದ್ದರು. ದಿಲ್ಲಿ ಕನ್ನಡಿಗರ ವಲಯದಲ್ಲಿ ಆಸ್ಕರಣ್ಣ ಎಂದೇ ಖ್ಯಾತಿಯಾಗಿದ್ದ ಅವರು, ಬಡ, ನೊಂದ, ಶೋಷಿತ ಹಾಗೂ ಹಿಂದುಳಿದ ಜನರ ಪ್ರೀತಿಪಾತ್ರರಾಗಿದ್ದರು. ರಾಷ್ಟ್ರ ರಾಜಕಾರಣದಲ್ಲಿ ವ್ಯಸ್ತರಾಗಿದ್ದ ಆಸ್ಕರ್, ರಾಜ್ಯ ರಾಜಕಾರಣದಲ್ಲಿ ಮೂಗು ತೂರಿಸಿದವರಲ್ಲ, ಆಸಕ್ತಿಯೂ ಇರಲಿಲ್ಲ.
ಆಸ್ಕರ್ ಫರ್ನಾಂಡಿಸ್ 5 ದಶಕ ಗಳಿಗೂ ಹೆಚ್ಚು ಕಾಲ ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಕ್ರಿಯಾಶೀಲ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು. ಸರಳರು, ನೇರ ನಡೆ-ನುಡಿಯ ಮಿತಭಾಷಿಗಳಾಗಿದ್ದರು. ಉತ್ತಮ ಯೋಗಪಟು ಆಗಿದ್ದರು. ದೆಹಲಿಯಲ್ಲಿ ಕರ್ನಾಟಕದ ಹಿತಾಸಕ್ತಿಗಳನ್ನು ಕಾಯುವಂತಹ ಹಿರಿಯ ಚೈತನ್ಯವಾಗಿದ್ದರು. ಶ್ರೀಮಠದೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದರು. ಅವರ ಅಗಲಿಕೆಯಿಂದ ರಾಜಕೀಯ ಕ್ಷೇತ್ರಕ್ಕೆ ಕೊರತೆಯಾಗಿದೆ.| ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಮಠಉಡುಪಿ ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ಬಹುವರ್ಷ ಸೇವೆ ಸಲ್ಲಿಸಿದ್ದ ಆಸ್ಕರ್ ಫರ್ನಾಂಡಿಸ್, ಯೋಗ ವಿದ್ಯೆಯಲ್ಲಿ ವಿಶೇಷ ಪರಿಣತಿ ಪಡೆದಿದ್ದರು. ಗೋವಿನ ಉತ್ಪನ್ನಗಳ ಔಷಧೀಯ ಮಹತ್ವದ ಬಗ್ಗೆ ಸಂಸತ್ನಲ್ಲಿ ವಿಚಾರ ಮಂಡಿಸಿರುವುದು ಮಹತ್ವದ ಸಂಗತಿ. ಪೇಜಾವರ ಮಠ ಸಹಿತ ಉಡುಪಿಯ ಎಲ್ಲ ಮಠಗಳೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದು, ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದರು. ಅವರ ನಿಧನದಿಂದ ನಾಡು ಓರ್ವ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡಿದೆ. ಆಸ್ಕರ್ ಆತ್ಮಕ್ಕೆ ಭಗವಂತ ಸದ್ಗತಿ ಕರುಣಿಸಲಿ ಎಂಬುದಾಗಿ ನಮ್ಮ ಆರಾಧ್ಯ ದೇವರಲ್ಲಿ ಪ್ರಾರ್ಥಿಸುತ್ತೇವೆ.| ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಮಠಾಧೀಶರು
ಆಸ್ಕರ್ ಫರ್ನಾಂಡಿಸ್ ವಿಶಿಷ್ಟ ರಾಜಕಾರಣಿ. ಯೋಗ, ಯಕ್ಷಗಾನ, ನೃತ್ಯ, ಹಾಡು, ಸಂಗೀತ, ಕಬಡ್ಡಿ, ವಾಲಿಬಾಲ್, ಈಜು ಹೀಗೆ ಬಹುಮುಖಿ ವ್ಯಕ್ತಿತ್ವ. ಪ್ರತಿದಿನ ಯೋಗಾಭ್ಯಾಸ ಮಾಡುತ್ತಿದ್ದರು. ಯೋಗದ ಬಲವಾದ ಸಮರ್ಥಕ. ನಿರಂತರ ಯೋಗಾಭ್ಯಾಸದಿಂದ ಆರೋಗ್ಯ ರಕ್ಷಣೆ ಸಾಧ್ಯವಿದ್ದು, ಆಸ್ಪತ್ರೆಗೆ ಖರ್ಚು ಮಾಡುವ ಹಣವನ್ನೂ ಕಡಿಮೆ ಮಾಡಬಹುದು ಎನ್ನುತ್ತಿದ್ದರು. ಇಳಿವಯಸ್ಸಿನಲ್ಲಿ ಭರತನಾಟ್ಯ, ಕೂಚಿಪುಡಿ ನೃತ್ಯ ಕಲಿತು ಸೈ ಅನ್ನಿಸಿಕೊಂಡಿದ್ದರು. ಮೌತ್ ಆರ್ಗನ್, ಹಾಮೋನಿಯಂ, ಕೀಬೋರ್ಡ್, ತಬಲಾ ನುಡಿಸುತ್ತಿದ್ದರು. ಸುಮಾರು 15 ವರ್ಷಗಳ ಹಿಂದೆ ದೆಹಲಿ ಕರ್ನಾಟಕ ಸಂಘದಲ್ಲಿ ‘ಕೃಷ್ಣಾರ್ಜುನ ಕಾಳಗ’ ಯಕ್ಷಗಾನದಲ್ಲಿ ವೀರಪ್ಪ ಮೊಯ್ಲಿ ಕರ್ಣ ಹಾಗೂ ಆಸ್ಕರ್ ಫರ್ನಾಂಡಿಸ್ ಭೀಷ್ಮನಾಗಿ ಪಾತ್ರ ನಿರ್ವಹಿಸಿದ್ದರು. ಚರ್ಚ್ ಮತ್ತಿತರ ವೇದಿಕೆಗಳಲ್ಲಿ ಅವಕಾಶ ಸಿಕ್ಕಾಗ ಹಾಡುಗಾರನಾಗುತ್ತಿದ್ದರು. ದಿಲ್ಲಿಯಲ್ಲಿ ಕನ್ನಡ ಮತ್ತು ತುಳುಭಾಷಾ ಚಟುವಟಿಕೆಗಳನ್ನು ಸದಾ ಬೆಂಬಲಿಸುತ್ತಿದ್ದ ಆಸ್ಕರ್, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲೆಂದು ದೆಹಲಿಗೆ ಬರುತ್ತಿದ್ದ ಕಲಾವಿದರೊಂದಿಗೆ ಕಲೆಯ ಬಗ್ಗೆ ವಿಶೇಷ ಆಸಕ್ತಿಯಿಂದ ರ್ಚಚಿಸುತ್ತಿದ್ದರು.
ಉಡುಪಿ ಅಷ್ಟಮಠದ ಯತಿಗಳಿಗೂ ಆಸ್ಕರ್ಗೂ ವಿಶೇಷ ನಂಟಿತ್ತು. ಮಠದ ಸಭೆಗಳಲ್ಲಿ ಕಾಯಂ ಆತಿಥಿಯಾಗಿದ್ದ ಆಸ್ಕರ್ ಕುರಿತು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ‘ಆಸ್ಕರ ಉಡುಪಿಯ ಭಾಸ್ಕರ’ ಎಂಬ ಪ್ರಶಂಸೆಯ ಮಾತುಗಳನ್ನಾಡಿದ್ದರು.
ಅತ್ಯುತ್ತಮ ರೈತ ಪ್ರಶಸ್ತಿ: ಅಂಬಲಪಾಡಿಯಲ್ಲಿ ಗೇಣಿಗೆ ಭೂಮಿ ಪಡೆದುಕೊಂಡು ಬೇಸಾಯ ಕೂಡ ಮಾಡಿದ್ದರು ಆಸ್ಕರ್. ಸ್ವತಃ ಅವರೇ ಉಳುಮೆ, ಭತ್ತ ನಾಟಿ ಮಾಡುತ್ತಿದ್ದರು. ಅತ್ಯುತ್ತಮ ಭತ್ತ ಬೆಳೆಗಾರ ಪ್ರಶಸ್ತಿಯೂ ಆಗಿನ ಕಾಲಕ್ಕೆ ಅವರಿಗೆ ಬಂದಿತ್ತು.
ಆದರ್ಶ ದಂಪತಿ: ಯಾವುದೇ ಕಾರ್ಯಕ್ರಮ, ಎಲ್ಲೇ ಹೋಗುವುದಿದ್ದರೂ ಆಸ್ಕರ್ ಅವರು ಪತ್ನಿ ಬ್ಲೋಸಂ ಅವರನ್ನು ಜತೆಗೇ ಕರೆದುಕೊಂಡು ಹೋಗುತ್ತಿದ್ದರು. ಈ ಬಗ್ಗೆ ಟೀಕೆ ಇದ್ದರೂ ಅವರ ನಿಲುವು ಬದಲಾಗಲಿಲ್ಲ. ಆಸ್ಕರ್ ಮಹಿಳೆಯರ ಬಗ್ಗೆ ವಿಶೇಷ ಗೌರವ ಹೊಂದಿದ್ದರು.
ಆಸ್ಕರ್ ಫರ್ನಾಂಡಿಸ್ ನಿಧನದ ಸುದ್ದಿ ತಿಳಿದು ವಿಷಾದವಾಯಿತು. ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಪುತ್ರ. ಸರಳ, ಸಜ್ಜನಿಕೆಯ ರಾಜಕಾರಣಿ, ಅವಿಶ್ರಾಂತ ದುಡಿಮೆಗೆ ಇನ್ನೊಂದು ಹೆಸರು. ಅವರ ಅಗಲಿಕೆಯಿಂದ ಕುಟುಂಬ ವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ, ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.| ಡಾ.ಡಿ.ವೀರೇಂದ್ರ ಹೆಗ್ಗಡೆ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ
‘ಆಸ್ಕರ್ ನಮ್ಮೊಂದಿಗೆ ಇಲ್ಲ, ಅದಕ್ಕಾಗಿ ಹೆಚ್ಚು ಅಳಬೇಡಿ. ನಿಮ್ಮೊಂದಿಗೆ ಅವರ ಸುಂದರ ನೆನಪುಗಳಿವೆ. ನಾವೆಲ್ಲರೂ ಅವರನ್ನು ತುಂಬಾ ಪ್ರೀತಿಸುತ್ತೇವೆ. ಅವರನ್ನು ಪ್ರೀತಿಸದವರು ಯಾರಿಲ್ಲ ಹೇಳಿ? ನೀವು ಧೈರ್ಯವಾಗಿರಿ’ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಫೋನ್ ಮೂಲಕ ಆಸ್ಕರ್ ಪತ್ನಿ ಬ್ಲೋಸಂ ಫರ್ನಾಂಡಿಸ್ ಅವರಿಗೆ ಸಾಂತ್ವನ ಮಾತುಗಳನ್ನಾಡಿದ್ದಾರೆ. ಬ್ಲೋಸಂ ಪ್ರತಿಕ್ರಿಯಿಸಿ, ‘ಆಸ್ಕರ್ ನಿಮ್ಮೆಲ್ಲರಿಗೂ ಬಹಳ ಆಪ್ತವಾಗಿದ್ದರು; ಅವರ ಪಾರ್ಥಿವ ಶರೀರವನ್ನು ಬೆಂಗಳೂರು ಕೆಪಿಸಿಸಿ ಕಚೇರಿಗೆ ತರುತ್ತೇವೆ. ಅಲ್ಲಿಗೆ ನೀವು, ರಾಹುಲ್ ಗಾಂಧಿ ಬರಬೇಕು’ ಎಂದಿದ್ದಾರೆ. ‘ನಿಮ್ಮ ನಿರ್ಧಾರದಂತೆಯೇ ಆಗಲಿ, ಮತ್ತೆ ಸಂರ್ಪಸುತ್ತೇನೆ’ ಎಂದು ಸೋನಿಯಾ ತಿಳಿಸಿದ್ದಾರೆ.