

ರಬಕವಿ/ಬನಹಟ್ಟಿ: ತೀವ್ರ ಬರಗಾಲ ಎದುರಿಸುತ್ತಿರುವ ಸಂದರ್ಭದಲ್ಲಿ ಜಮಖಂಡಿ, ರಬಕವಿ-ಬನಹಟ್ಟಿ ಹಾಗೂ ಮುಧೋಳ ತಾಲೂಕಿನ ಸಾವಿರಾರು ಎಕರೆ ಭೂಮಿಗೆ ನೀರು ಹರಿಸುವ ನಿಟ್ಟಿನಲ್ಲಿ ವೆಂಕಟೇಶ್ವರ ಏತ ನೀರಾವರಿ ಹಾಗೂ ಕುಲಹಳ್ಳಿ-ಹುನ್ನೂರ ಏತ ನೀರಾವರಿಗೆ ಶೀಘ್ರವೇ ಚಾಲನೆ ದೊರಕಲಿದೆ ಎಂದು ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಹೇಳಿದರು.
ತಾಲೂಕಿನ ಕುಲಹಳ್ಳಿ ಗ್ರಾಮದಲ್ಲಿರುವ ಎರಡೂ ಏತ ನೀರಾವರಿಗಳ ಘಟಕಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವೆಂಕಟೇಶ್ವರ ಹಾಗೂ ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆಗಳು ಕಳೆದ ಏಳೆಂಟು ವರ್ಷಗಳಿಂದ ಆಮೆಗತಿಯಲ್ಲಿ ಕಾಮಗಾರಿ ನಡೆಯುತ್ತಿತ್ತು. ಅದಕ್ಕೆ ವೇಗಕ್ಕೆ ಸ್ಪೂರ್ತಿ ನೀಡಿದ್ದೇ ನಾನು.
ಸರ್ಕಾರ ಬದಲಿಯಾದ ಕಾರಣ ಮತ್ತೆ ವಿಳಂಬಕ್ಕೆ ಕಾರಣವಾಗಿದೆ. ಪ್ರಾಯೋಗಿಕವಾಗಿ ಪ್ರಾರಂಭಿಸಲು ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ ಎಂದರು.
ಇದನ್ನೂ ಓದಿ: ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆ
ರೈತರ ಅನುಕೂಲದ ಯೋಜನೆಗಳಲ್ಲಿ ರಾಜಕೀಯ ಬೆರೆಸಬಾರದು. ಸಹಕಾರ ನೀಡುವ ಬದಲು ಇತಿಹಾಸ ಗೊತ್ತಿಲ್ಲದೆ ರಾಜಕೀಯ ನಡೆಸುತ್ತ ಜನರಿಗೆ ತಪ್ಪು ಕಲ್ಪನೆ ನೀಡುತ್ತಿರುವದನ್ನು ಖಂಡಿಸುತ್ತೇನೆಂದು ಪರೋಕ್ಷವಾಗಿ ಕ್ಷೇತ್ರದ ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ವಿರುದ್ಧ ಶಾಸಕ ಸಿದ್ದು ಸವದಿ ಹರಿಹಾಯ್ದರು.
ರೈತರ ಪರವಾಗಿರುವ ಸರ್ಕಾರ ಎಲ್ಲದಕ್ಕೂ ಸಹಕಾರವಿದೆ. ಅದರಂತೆ ಸ್ಥಳೀಯರ ವಿರೋಧ ಅಷ್ಟೇ ಇರುವುದು ಕಂಡು ಬರುತ್ತದೆ ಎಂದು ಸವದಿ ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡಿಕಾರಿದರು.
ವೆಂಕಟೇಶ್ವರ ಏತ ನೀರಾವರಿ ಯೋಜನಡ 54 ಕೋಟಿ ರೂ. ವೆಚ್ಚದಾಗಿದ್ದು, ರಬಕವಿ-ಬನಹಟ್ಟಿ, ಜಮಖಂಡಿ ಹಾಗೂ ಮುಧೋಳ ತಾಲೂಕಿನ 15 ಗ್ರಾಮಗಳ 20 ಸಾವಿರ ಎಕರೆಯಷ್ಟು ಭೂಮಿಯೊಂದಿಗೆ ಸಾವಿರಾರು ರೈತರಿಗೆ ಸಂಜೀವಿನಿಯಾಗಿದೆ. 0.75 ಟಿಎಂಸಿ ಬಳಕೆ ಸಾಮರ್ಥ್ಯ ಹೊಂದಿದೆ ಎಂದರು.
ಕುಲಹಳ್ಳಿ-ಹುನ್ನೂರ ಏತ ನೀರಾವರಿ ಯೋಜನೆ 74 ಕೋಟಿ ರೂ. ವೆಚ್ಚದಾಗಿದ್ದು, ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ತಾಲೂಕಿನ 14 ಗ್ರಾಮಗಳ 23 ಸಾವಿರ ಎಕರೆ ಭೂಮಿಯೊಂದಿಗೆ ಸಾವಿರಾರು ರೈತರಿಗೆ ಸಂಜೀವಿನಿಯಾಗಿದೆ. 0.88 ಟಿಎಂಸಿಯಷ್ಟು ಬಳಕೆ ಸಾಮರ್ಥ್ಯ ಹೊಂದಿದೆ ಎಂದರು.