

ಜಮಖಂಡಿ: ಐತಿಹಾಸಿಕ ಹಿನ್ನೆಲೆ ಹೊಂದಿದ ದೇವಸ್ಥಾನಗಳ ಮಹಿಮೆಗಳನ್ನು ಸಂಗೀತದ ಮೂಲಕ ನಾಡಿನ ಜನತೆಗೆ ಮುಟ್ಟಿಸುವ ಕಾರ್ಯ ನಡೆಯಬೇಕು ಎಂದು ಡಿವೈಎಸ್‌ಪಿ ಶಾಂತವೀರ ಈ ಹೇಳಿದರು.
ತಾಲೂಕಿನ ಕಡಪಟ್ಟಿ ಪವಾಡ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಗುರುವಾರ ಪವಾಡ ಬಸವಣ್ಣ ಭಕ್ತಿಗೀತೆಗಳ ಧ್ವನಿಸುರುಳಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕಡಪಟ್ಟಿ ಬಸವಣ್ಣನ ಭಕ್ತರು ರಾಜ್ಯ ಸೇರಿ ಹೊರರಾಜ್ಯಗಳಲ್ಲಿಯೂ ಇದ್ದಾರೆ. ಈ ಕ್ಷೇತ್ರದ ಮಹಿಮೆಯನ್ನು ನಾಡಿನುದ್ದಕ್ಕೂ ಪಸರಿಸಬೇಕಾಗಿದೆ ಎಂದರು.
ಕೊಣ್ಣೂರ ಹೊರಗಿನಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀಗಳು ಮಾತನಾಡಿ, ಕೊಣ್ಣೂರ ಗ್ರಾಮಕ್ಕೂ ಕಡಪಟ್ಟಿ ದೇವಸ್ಥಾನಕ್ಕೂ ಅವಿನಾಭಾವ ಸಂಬಂಧ ಇದೆ. ದೇವರು ಎಷ್ಟು ಮುಖ್ಯವೋ ಗುರು ಅಷ್ಟೆ ಮುಖ್ಯ ಎಂದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು ಮಾತನಾಡಿ, ಇತಿಹಾಸಗಳನ್ನು ಪುಸ್ತಕಗಳಿಂದಲ್ಲದೆ ಗೀತೆಗಳ ಮೂಲಕವೂ ಕೇಳಿದರೆ ಸ್ಮರಣೆಯಲ್ಲಿ ಉಳಿಯುತ್ತದೆ. ಇಲ್ಲಿನ ಹಿರಿಯರ ಅನುಭವಗಳು ಹಾಗೂ ಇತಿಹಾಸವನ್ನು ಗಣನೆಗೆ ತೆಗೆದುಕೊಂಡು ಇತಿಹಾಸ ಪುಸ್ತಕ ರಚನೆಯಾಗಬೇಕು.
ಸನಾತನ ಧರ್ಮದ ಇತಿಹಾಸಯುಳ್ಳ ಪವಾಡ ಬಸವೇಶ್ವರ ದೇವಸ್ಥಾನದ ಕುರಿತು ಧ್ವನಿಸುರುಳಿ ಹೊರ ತಂದಿದ್ದು ಶ್ಲಾಘನೀಯ ಎಂದರು.
ಸಾಹಿತಿ ಪ್ರಕಾಶ ಮಠಪತಿ ದೇವಸ್ಥಾನದ ಇತಿಹಾಸ ಕುರಿತು ಮಾತನಾಡಿದರು. ಬಸಯ್ಯ ಮಠಪತಿ, ಶ್ರೀಕಾಂತ ರಾಮದುರ್ಗ, ಸಲಬಯ್ಯ ಮಠಪತಿ, ಸಂಗಯ್ಯ ಆಲಬಾಳ, ಬಾಲಚಂದ್ರ ಮಡಿವಾಳರ, ಶ್ರೀಧರ ಹಿರೇಮಠ, ರಾಮಣ್ಣ ನಾಯಕ, ಗಣಪತಿ ಬೊಮ್ಮಣ್ಣವರ, ಬಸಲಿಂಗ ಮಾಳಿ ಇತರರಿದ್ದರು.
ಮಹಾದೇವಿ ಪೂಜಾರಿ ಪ್ರಾರ್ಥಿಸಿದರು. ನಾಗರಾಜ ಹರಗಣಿ ಸ್ವಾಗತಿಸಿ ನಿರೂಪಿಸಿದರು.