

ಬಿಡದಿ: ಹೋಬಳಿಯ ಗ್ರಾಮವೊಂದರಲ್ಲಿ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಅಸ್ಸಾಂ ಮೂಲದ ಮಂಜೂ ಅಲಾಂ (26) ಎಂಬಾತನನ್ನು ಬಿಡದಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಖಾಸಗಿ ಕಂಪನಿಯಲ್ಲಿ ಒಡಿಶಾ ಮೂಲದ ಯುವತಿ ಕುಟುಂಬ ಹಾಗೂ ಯುವಕನ ಪಾಲಕರು ಕೆಲಸ ಮಾಡಿಕೊಂಡಿದ್ದರು. ಸಂತ್ರಸ್ತ ಯುವತಿ ಮನೆಯವರು ಕೆಲಸಕ್ಕೆ ಹೋಗಿದ್ದ ವೇಳೆ ಮಂಗಳವಾರ ಮನೆಗೆ ನುಗ್ಗಿದ ದುರುಳ ಅತ್ಯಾಚಾರ ಮಾಡಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಹಾಗಾಗಿ ಈ ವಿಚಾರವನ್ನು ನೊಂದ ಯುವತಿ ಪಾಲಕರಿಗೆ ಹೇಳಿರಲಿಲ್ಲ. ಮಂಗಳವಾರ ರಾತ್ರಿ ಏಕಾಏಕಿ ಯುವತಿಗೆ ರಕ್ತಸ್ರಾವ ಕಾಣಿಸಿಕೊಂಡಿದೆ. ಈ ವಿಚಾರವಾಗಿ ಯುವತಿಯನ್ನು ಪ್ರಶ್ನೆ ಮಾಡಲಾಗಿ ಸತ್ಯ ಹೊರ ಬಂದಿದೆ. ಸಂತ್ರಸ್ತ ಯುವತಿಯನ್ನು ಬಿಡದಿಯ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬುಧವಾರ ಯುವತಿಯ ತಂದೆ ಬಿಡದಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಆರೋಪಿ ಮಂಜೂ ಅಲಾಂನನ್ನು ಪೋಲೀಸರು ಬಂಧಿಸಿದ್ದಾರೆ.