

ವಿಜಯವಾಣಿ ಸುದ್ದಿಜಾಲ ಕಾರ್ಕಳ
ಅಮಲು ಪದಾರ್ಥ ನೀಡಿ ಹಿಂದು ಯುವತಿಯ ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಆರೋಪಿಗಳಾದ ಅಲ್ತಾಫ್ ಹಾಗೂ ಶ್ರಾವೆದ್ ರಿಚರ್ಡ್ ಕ್ವಾಡ್ರಸ್‌ನನ್ನು ಪೊಲೀಸರು ಕೋರ್ಟ್ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗಳನ್ನು ಕಾರ್ಕಳ ನಗರ ಠಾಣಾ ಪೊಲೀಸರಿಗೆ ನಾಲ್ಕು ದಿನಗಳ ಕಸ್ಟಡಿಗೆ ನೀಡಿದೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಸಂದರ್ಭ ನಗರ ಠಾಣೆ ಪೊಲೀಸರು ಆರೋಪಿಗಳನ್ನು ಕಸ್ಟಡಿಗೆ ಕೇಳಿದ್ದರು. ಅದರಂತೆ ನಾಲ್ಕು ದಿನ ಪೊಲೀಸ್ ವಶಕ್ಕೆ ನೀಡಿದ್ದು, ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸಲಾಗುವುದು ಎಂದು ಉಡುಪಿ ಎಸ್‌ಪಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇನ್‌ಸ್ಟಗ್ರಾಂ ಮೂಲಕ 3 ತಿಂಗಳ ಹಿಂದೆ ಪರಿಚಯವಾದ ಯುವತಿಯನ್ನು ಕಾರಿನಲ್ಲಿ ಅಪಹರಿಸಿ ಬೈಲೂರು ಸಮೀಪದ ರಂಗನಪಲ್ಕೆ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಆಕೆಗೆ ಬಿಯರ್‌ನಲ್ಲಿ ಅಮಲು ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ಅಲ್ತಾಫ್ ಹಾಗೂ ಮದ್ಯ ಸರಬರಾಜು ಮಾಡಿದ ಶ್ರಾವೆದ್ ರಿಚರ್ಡ್ ಕ್ವಾಡ್ರಸ್‌ನನ್ನು ವಶಕ್ಕೆ ಪಡೆದಿದ್ದರು. ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಅಲ್ತಾಫ್ ಸಹೋದರ ಮಾಧ್ಯಮದೊಂದಿಗೆ ಮಾತನಾಡಿ, ನನ್ನ ಅಣ್ಣನಿಗೆ ಯಾವುದೇ ದುಶ್ಚಟಗಳಿರಲಿಲ್ಲ, ಆತನ ಗೆಳೆಯರೇ ಒತ್ತಾಯಪೂರ್ವಕವಾಗಿ ಕಲಿಸಿಕೊಟ್ಟಿದ್ದಾರೆ ಎಂದಿದ್ದಾನೆ. ಅಲ್ತಾಫ್‌ನ ತಾಯಿ ಆಯಿಷಾ, ಪೊಲೀಸರು ನಮ್ಮ ಬಳಿ ಏನೂ ಹೇಳಿಲ್ಲ. ಸ್ಟೇಷನ್‌ಗೆ ಹೋದಾಗ ಮತ್ತೆ ಬನ್ನಿ ಫೋನ್ ಮಾಡುತ್ತೇವೆ ಎಂದಿದ್ದಾರೆ. ಮಗನನ್ನು ಒಮ್ಮೆ ಬಿಡಿಸಿ ತರಬೇಕು, ಆತ ಅತ್ಯಾಚಾರ ಮಾಡಿದ ಬಗ್ಗೆ ವಿಷಯ ಗೊತ್ತಿಲ್ಲ ಎಂದಿದ್ದಾರೆ. ಶ್ರಾವೆದ್ ರಿಚರ್ಡ್ ಕ್ವಾಡ್ರಸ್‌ನ ತಾಯಿ ಮಾತನಾಡಿ, ಈ ವಿಚಾರ ಕಂಡು ಆಘಾತವಾಗಿದೆ. ನನ್ನ ಮಗನನ್ನು ಪ್ರಕರಣದಲ್ಲಿ ಸಿಕ್ಕಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂದಿದ್ದಾರೆ.