

Ranya Rao : ವಿದೇಶದಿಂದ ಅಕ್ರಮವಾಗಿ ಚಿನ್ನ ತಂದ ಆರೋಪದ ಮೇಲೆ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದು, ಈ ಪ್ರಕರಣವನ್ನು ಕೆದಕಿದಷ್ಟು ನಟಿಯ ಸ್ಮಗ್ಲಿಂಗ್ ಕಹಾನಿ ಒಂದೊಂದಾಗಿ ತೆರೆದುಕೊಳ್ಳುತ್ತಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುಮಾರು 12 ಕೋಟಿ ರೂ. ಮೌಲ್ಯದ 14.8 ಕೆಜಿ ಚಿನ್ನವನ್ನು ವಶಕ್ಕೆ ಪಡೆದ ಬೆನ್ನಲ್ಲೇ ನಗರದ ಲ್ಯಾವೆಲ್ಲಿ ರಸ್ತೆಯಲ್ಲಿರುವ ರನ್ಯಾ ರಾವ್ ಮನೆಯ ಮೇಲೆ ಡಿಆರ್‌ಐ ಅಧಿಕಾರಿಗಳು ದಾಳಿ ಮಾಡಿದ್ದು, 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಜೊತೆಗೆ 2.67 ಕೋಟಿ ರೂಪಾಯಿ ನಗದನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಈವರೆಗೆ ಚಿನ್ನ ಮತ್ತು ನಗದು ಸೇರಿ ಬರೋಬ್ಬರಿ 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಅಚ್ಚರಿಯ ಸಂಗತಿ ಏನೆಂದರೆ, ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ಇತಿಹಾಸದಲ್ಲಿ ಇಷ್ಟು ದೊಡ್ಡ ಪ್ರಮಾಣ ಚಿನ್ನವನ್ನು ವಶಕ್ಕೆ ಪಡೆದಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಭಾರಿ ಪ್ರಮಾಣದಲ್ಲಿ ಚಿನ್ನ ಮತ್ತು ನಗದು ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಕೂಡ ಎಂಟ್ರಿಯಾಗುವ ಸಾಧ್ಯತೆ ಇದೆ.
ಇತ್ತೀಚೆಗೆ ರನ್ಯಾ ರಾವ್, ಆಗಾಗ ದುಬೈಗೆ ಭೇಟಿ ನೀಡುತ್ತಿದ್ದರು. ಹೀಗಾಗಿ ಅಧಿಕಾರಿಗಳು ಆಕೆಯ ಮೇಲೆ ನಿಗಾ ಇಟ್ಟಿದ್ದರು. ಕೇವಲ 15 ದಿನಗಳ ಅವಧಿಯಲ್ಲಿ ರನ್ಯಾ ನಾಲ್ಕು ಬಾರಿ ದುಬೈಗೆ ಭೇಟಿ ನೀಡಿದ್ದು, ತನ್ನ ಬಟ್ಟೆಗಳಲ್ಲಿ ಚಿನ್ನದ ಬಿಸ್ಕತ್ತುಗಳನ್ನು ಬಚ್ಚಿಟ್ಟು ವಾಪಸ್ ತಂದಿದ್ದಾರೆ ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ರನ್ಯಾ ರಾವ್ ಅವರನ್ನು ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಬಳಿಕ ರನ್ಯಾ ಅವರನ್ನು ನಗರದ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರು ಪಡಿಸಲಾಯಿತು. ವಿಚಾರಣೆ ನಡೆಸಿ ನ್ಯಾಯಾಧೀಶರು ಆರೋಪಿತೆಗೆ ಮಾರ್ಚ್ 18ರ ವರೆಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
ನಟಿ ರನ್ಯಾ ಸೋಮವಾರ (ಮಾ.03) ರಾತ್ರಿ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದರು. ಮೊದಲೇ ಆಕೆಯ ಮೇಲೆ ಅನುಮಾನ ಇದ್ದ ಕಾರಣ ಅಧಿಕಾರಿಗಳು ಸಂಪೂರ್ಣವಾಗಿ ಪರಿಶೀಲಿಸಿದರು. ಈ ವೇಳೆ ಅವರಿಗೆ ಅಚ್ಚರಿಯೊಂದು ಎದುರಾಗಿತ್ತು. ಅದೇನೆಂದರೆ, ಭಾರಿ ಪ್ರಮಾಣದ ಚಿನ್ನ ರನ್ಯಾ ಬಳಿ ಪತ್ತೆಯಾಯಿತು. ಆಕೆ ತಂದಿದ್ದ 14.8 ಕೆಜಿ ಚಿನ್ನದಲ್ಲಿ ಆಕೆ ತೊಟ್ಟಿದ್ದ ಬಟ್ಟೆಯಲ್ಲೇ ಮುಕ್ಕಾಲು ಭಾಗ ಇತ್ತಂತೆ. ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಸುತ್ತಿ, ಬ್ಯಾಗ್ನಲ್ಲಿ ಇಟ್ಟಿರುವುದು ಪತ್ತೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ರನ್ಯಾ ಅವರಿಗೆ ದುಬೈ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಚಿನ್ನವನ್ನು ತಂದುಕೊಡುತ್ತಿದ್ದ. ಅದನ್ನು ಶೌಚಾಲಯದಲ್ಲಿ ಪಡೆದು, ಗಮ್ ಬಳಸಿ ಚಿನ್ನವನ್ನು ಅಂಟಿಸಿ, ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಸುತ್ತಿಟ್ಟು, ಬ್ಯಾಗ್ನಲ್ಲಿಟ್ಟು ತರುತ್ತಿದ್ದರು. ಬೆಂಗಳೂರಿಗೆ ಬಂದಾಗ ಏರ್ಪೋರ್ಟ್ನಲ್ಲಿ ತಾನು ಡಿಜಿ ಮಗಳೆಂದು ಹೇಳಿ ತಪಾಸಣೆ ಇಲ್ಲದೆ ಹೊರಗೆ ಬರುತ್ತಿದ್ದಳು ಎನ್ನಲಾಗಿದೆ.
ಇನ್ನು ರನ್ಯಾ ಅವರು 3 ತಿಂಗಳ ಹಿಂದೆಯೇ ಬೆಂಗಳೂರಲ್ಲಿ ಅದ್ಧೂರಿಯಾಗಿ ವಿವಾಹವಾಗಿದರು. ರಾಜ್ಯದ ಪ್ರಖ್ಯಾತ ರಾಜಕೀಯ ಕುಟುಂಬದ ಸಂಬಂಧಿಕರೊಬ್ಬರನ್ನು ರನ್ಯಾ ರಾವ್ ವಿವಾಹವಾಗಿದ್ದಾರೆ. ರನ್ಯಾ ಪತಿ ಆರ್ಕಿಟೆಕ್ಟ್ ಆಗಿದ್ದು, ಮದುವೆಯಾದ ಬಳಿಕ ಲ್ಯಾವೆಲ್ಲಿ ರಸ್ತೆಯ ಫ್ಲಾಟ್‌ಗೆ ಶಿಪ್ಟ್ ಆಗಿದ್ದರು. ಒಂದೇ ವರ್ಷದಲ್ಲಿ ಸುಮಾರು 40ಕ್ಕೂ ಅಧಿಕ ಬಾರಿ ವಿದೇಶಕ್ಕೆ ಭೇಟಿ ನೀಡಿ ಬಂದಿದ್ದಾರೆ ಎನ್ನಲಾಗಿದೆ. ಸಾಕಷ್ಟು ಚಿನ್ನವನ್ನು ಕಳ್ಳಸಾಗಾಣೆ ಮಾಡಲಾಗಿದ್ದು, ಇದರ ಹಿಂದೆ ಸಾಕಷ್ಟು ಮಂದಿಯ ಕೈವಾಡ ಇರುವ ಶಂಕೆಯೂ ವ್ಯಕ್ತವಾಗಿದೆ.
ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾದ ರನ್ಯಾ ಅವರು ಡಿಐಜಿ ರಾಮಚಂದ್ರ ರಾವ್ 2ನೇ ಪತ್ನಿ ಮೊದಲ ಗಂಡನ ಮಗಳಾಗಿದ್ದಾರೆ. ಅಂದಹಾಗೆ ರನ್ಯಾ ರಾವ್ ಅವರು ನಟ ಸುದೀಪ್ ಅಭಿನಯದ ಮಾಣಿಕ್ಯ ಹಾಗೂ ಗಣೇಶ್ ನಟನೆಯ ಪಟಾಕಿ ಸಿನಿಮಾದಲ್ಲಿ ನಟಿಸಿದ್ದಾರೆ.