

Rani Channamma : ಭಾರತ ಸ್ವಾತಂತ್ರ್ಯಕ್ಕೆ ಬ್ರಿಟಿಷರ ವಿರುದ್ಧ ತೊಡೆತಟ್ಟಿದ ಪ್ರಥಮ ಮಹಿಳೆ ರಾಣಿ ಚೆನ್ನಮ್ಮನ ಐತಿಹಾಸಿಕ ಅರಮನೆ ದಶಕಗಳು ಕಳೆದರೂ ಕತ್ತಲಲ್ಲಿದೆ. ವಿದ್ಯಾರ್ಥಿಗಳು ಮೊಬೈಲ್ ಬೆಳಕಿನಲ್ಲಿ ಅರಮನೆ ವೀಕ್ಷಿಸಿ ಇತಿಹಾಸ ತಿಳಿದುಕೊಳ್ಳುತ್ತಿರುವ ದೃಶ್ಯ ಕಂಡ ನಾಡ ಜನರಲ್ಲಿ ಮುಜುಗರ ತರಿಸಿತು.
ಶಾಲಾ ಕಾಲೇಜು ವಿದ್ಯಾರ್ಥಿಗಳು ಮಂಗಳವಾರ ಸಂಜೆ ಕಿತ್ತೂರಾಣಿ ಚೆನ್ನಮ್ಮನ ಐತಿಹಾಸಿಕ ಕೋಟೆ ವೀಕ್ಷಿಸಿ ಇತಿಹಾಸ ತಿಳಿಯಲು ಕೋಟೆಗೆ ಆಗಮಿಸಿದ್ದರು. ಸ್ವಲ್ಪ ತಡವಾಗಿ ಆಗಮಿಸುತ್ತಿದ್ದಂತೆ ಕೋಟೆಯ ಸುತ್ತ ಕತ್ತಲೆ ಆವರಿಸಿತು. ಕೋಟೆಯ ಸುತ್ತ ಬೆಳಕಿನ ವ್ಯವಸ್ಥೆ ನೋಡಿ ಅರಮನೆಯಲ್ಲಿ ಬೆಳಕಿನ ವ್ಯವಸ್ಥೆ ಇರಬಹುದು ಎಂದು ವಿದ್ಯಾರ್ಥಿಗಳು ಒಳಗೆ ಪ್ರವೇಶಿಸಿದಂತೆ ರಾಣಿ ಚೆನ್ನಮ್ಮಜಿ ಅರಮನೆ ಸಂಪೂರ್ಣ ಕತ್ತಲಲ್ಲಿ ಇರುವುದನ್ನು ಕೊಂಡು ವಿದ್ಯಾರ್ಥಿಗಳಲ್ಲಿ ನಿರಾಸೆ ಮೂಡಿಸಿತು.
ಕೋಟೆ ಸುತ್ತ ಬೆಳಕಿನ ವ್ಯವಸ್ಥೆ ಇದೆ. ಆದರೆ, ರಾಣಿ ಚೆನ್ನಮ್ಮಜಿಯ ಕತೆಯನ್ನು ಸಾರಿ ಹೇಳುವ ಅರಮನೆ ಸಂಪೂರ್ಣ ಬೆಳಕಿಲ್ಲದೆ ಕತ್ತಲಲ್ಲಿ ಇದೆ. ತಡವಾಗಿ ಬಂದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅರಮನೆಯನ್ನು ಮೊಬೈಲ್ ಬೆಳಕಿನ ಸಹಾಯದಿಂದ ವೀಕ್ಷಿಸುವ ದೃಶ್ಯ ಕೋಟಿಯಲ್ಲಿ ನೆರೆದಿದ್ದ ಕಿತ್ತೂರು ಜನರ ಗಮನ ಸೆಳೆಯಿತು. ಅರಮನೆ ವೀಕ್ಷಿಸಿ ಅರಮನೆಯ ಮುಂಭಾಗದ ಸಭಾಂಗಣದಲ್ಲಿ ಗೈಡ್ ಮಾಡುತ್ತಿದ್ದವರ ಮಾತುಗಳನ್ನು ಕತ್ತಲಲ್ಲೇ ಕೆಳಗೆ ಕುಳಿತು ಇತಿಹಾಸ ಕೇಳುತ್ತಿದ್ದ ವಿದ್ಯಾರ್ಥಿಗಳನ್ನು ಕಂಡು ಸಾರ್ವಜನಿಕರಲ್ಲಿ ಬೇಸರ ಮೂಡಿಸಿತು. ಜಗತ್ತಿಗೆ ಸಾರಿ ಹೇಳುವ ಐತಿಹಾಸಿಕ ರಾಣಿ ಚೆನ್ನಮ್ಮಾಜಿಯ ಅರಮನೆಯನ್ನು ಇವತ್ತು ಪ್ರವಾಸಿಗರು ಮೊಬೈಲ್ ಬೆಳಕಿನಲ್ಲಿ ವೀಕ್ಷಿಸುವಂತಹ ಸ್ಥಿತಿಯಲ್ಲಿರುವುದು ರಾಣಿ ಚೆನ್ನಮ್ಮಾಜಿಯ ಅಭಿಮಾನಿಗಳಾದ ನಾಡ ಜನರಿಗೆ ಮುಜುಗರ ಮಾಡಿದೆ.
ರಾಣಿ ಚೆನ್ನಮ್ಮಾಜಿಯ ಆಳ್ವಿಕೆಯ ಇತಿಹಾಸ ಸಾರಿ ಹೇಳಬೇಕಿದ್ದ ಬಹುಮುಖ್ಯ ಕುರುಹು ಅರಮನೆ ಸಂಪೂರ್ಣ ಕತ್ತಲಲ್ಲಿ ಇರುವ ಕಾರಣ ಸಂಜೆ ಆಗುತ್ತಿದ್ದಂತೆ ಪುಂಡ ಪೋಕರಿಗಳಿಗೆ, ಕುಡುಕರಿಗೆ ಅಡ್ಡವಾಗಿದೆ. ಇಲ್ಲಿ ಬೆಳಕು ಇಲ್ಲದ್ದರಿಂದ ಅನೈತಿಕ ಚಟುವಟಿಕೆ ನಡೆಸಲು ಮತ್ತಷ್ಟು ಅನುಕೂಲವಾಗಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಥಮವಾಗಿ ಹೋರಾಟದ ಕಹಳೆ ಊದಿದ ಮೊಟ್ಟ ಮೊದಲ ನಾಡಿಗೆ, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 78 ವರ್ಷ ಕಳೆದರೂ ಪ್ರವಾಸೋದ್ಯಮದಲ್ಲಿ ಸ್ಥಾನಮಾನ ಸಿಕ್ಕಿಲ್ಲ. ರಾಷ್ಟ್ರೀಯ ಪ್ರವಾಸಿ ತಾಣವಾಗಬೇಕಿದ್ದ ರಾಣಿ ಚೆನ್ನಮ್ಮಾಜಿ ನಾಡಿಗೆ ಸಿಗಬೇಕಾದಸ್ಟು ಅನುದಾನ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೀಡದೆ ಕಡೆಗಣಿಸುತ್ತಿರುವುದು ವಿಪರ್ಯಾಸವೇ ಸರಿ.
ರಾಣಿ ಚೆನ್ನಮ್ಮಜಿ ಇತಿಹಾಸ ಕಣ್ಣಾರೆ ನೋಡಿ ಇತಿಹಾಸ ತಿಳಿಯಲು ಹುಮ್ಮಸ್ಸಿನಲ್ಲಿ ಬರುವ ಪ್ರವಾಸಿಗರು ನಿರಾಸೆಯಿಂದ ತೆರಳುವಂತಾಗದೆ ಕಗ್ಗತ್ತಿನಲ್ಲಿರುವ ಐತಿಹಾಸಿಕ ರಾಣಿ ಚೆನ್ನಮ್ಮಾಜಿಯ ಅರಮನೆ ಸದಾ ಬೆಳಕಿನಲ್ಲಿ ಕಂಗೊಳಿಸಲು ಜನ ಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರ ಮುಂದಾಗಬೇಕೆಂದು ರಾಣಿ ಚೆನ್ನಮ್ಮಾಜಿಯ ಅಭಿಮಾನಿಗಳು ಆಗ್ರಹಿಸಿದ್ದಾರೆ.
ನಮ್ಮ ಕಾಲೇಜು ವಿದ್ಯಾರ್ಥಿಗಳು ಐತಿಹಾಸಿಕ ರಾಣಿ ಚೆನ್ನಮ್ಮ ಜಿ ಕೋಟೆಯ ವೀಕ್ಷಿಸಲು ಬಂದಿದ್ದೆವು. ಸ್ವಲ್ಪ ತಡವಾದ ಕಾರಣ ಅರಮನೆ ಸಂಪೂರ್ಣ ಕತ್ತಲಲ್ಲಿದ್ದ ಕಾರಣ ನಮ್ಮ ವಿದ್ಯಾರ್ಥಿಗಳು ಮೊಬೈಲ್ ಬೆಳಕಿನ ಸಹಾಯದಿಂದ ವೀಕ್ಷಿಸಿದರು. ಸರ್ಕಾರ ಯಾವುದಕ್ಕೋ ಕೋಟ್ಯಾಂತರ ರೂಪಾಯಿ ಹಣವನ್ನು ವೆಚ್ಚು ಮಾಡುತ್ತದೆ. ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ರಾಣಿ ಚೆನ್ನಮ್ಮಾಜಿಯ ಅರಮನೆ ಯಾಕೆ ಸದಾ ಬೆಳಕಿನಲ್ಲಿ ಇರುವಂತೆ ಮಾಡಬಾರದು ಎಂದು ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಧ್ಯಾಪಕ ಡಾ.ಮಹಾದೇವಪ್ಪ ದಳಪತಿ ಹೇಳಿದರು.