ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ

21 RMN-MGD P1 (1)
Published on

*ಭಕ್ತರು ಗೋವಿಂದ....ಗೋವಿಂದ....ಎಂಬ ಘೋಷಣೆ

* ಸ್ವಾಮಿಗೆ ವಜ್ರ ಖಚಿತ ಚಿನ್ನದ ಕಿರೀಟ ಧಾರಣೆ

ಮಾಗಡಿ

ತಾಲೂಕಿನ  ಪುರಾಣ ಪ್ರಸಿದ್ಧ ಮಾಂಡವ್ಯ ಕುಟೀ ತಿರುಮಲೆ ಶ್ರೀರಂಗನಾಥಸ್ವಾಮಿಯ ಬ್ರಹ್ಮರಥೋತ್ಸವ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ಬ್ರಹ್ಮರಥೋತ್ಸವದಲ್ಲಿ ರಾಜ್ಯ ಸೇರಿ ಹೋರ ರಾಜ್ಯದಿಂದಲೂ ಲಕ್ಷಾಂತರ ಭಕ್ತರು ಆಗಮಿಸಿ ತಿರುಮಲೆ ರಂಗನ ದರ್ಶನ ಪಡೆದರು. ಗರುಡದೇವ ಮೊದಲಿಗೆ ರಥದ ಮೇಲೆ ಹಾರಾಡಿ ಶುಭಸೂಚನೆ ನೀಡಿದ ನಂತರ ತಹಸೀಲ್ದಾರ್ ಶರತ್ ಕುಮಾರ್ ಬ್ರಹ್ಮರಥೋತ್ಸವಕ್ಕೆ ಪ್ರಥಮ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಬೆಳಗ್ಗೆ ಬ್ರಹ್ಮರಥೋತ್ಸವ ನಂತರ ಮಡಿತೇರು ಸಂಜೆ 6ರಿಂದ 8 ಗಂಟೆಯವರೆಗೆ, ರಾತ್ರಿ 12 ಗಂಟೆಗೆ ದೊಡ್ಡಗರುಡೋತ್ಸವ ನಡೆಯಿತು. ಗಣ್ಯರ ಶೀಘ್ರ ದರ್ಶನಕ್ಕೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಶಾಸಕ ಎಚ್.ಸಿ.ಬಾಲಕೃಷ್ಣ, ಮಾಜಿ ಶಾಸಕ ಎ.ಮಂಜುನಾಥ್ ವಿವಿಧ ಸಮುದಾಯಗಳ ಅರವಂಟಿಕೆಗಳಿಗೆ ಭೇಟಿ ನೀಡಿದ್ದರು.

ಪಟ್ಟಣದ ಗೌರಮ್ಮನಕೆರೆ ಕ್ರಾಸ್ ನಿಂದ ದೇವಾಲಯದ ಸುಮಾರು ಎರಡು ಕಿ.ಮೀ. ಅರವಟ್ಟಿಗೆಗಳು ಇದ್ದವು. ಜಾತಿ, ಧರ್ಮ, ವರ್ಗ, ಭೇದವಿಲ್ಲದೆ ಅನ್ನಸಂತರ್ಪಣೆ ಮತ್ತು  ತಿರುಮಲೆ ರಂಗನ ಪ್ರಸಾದ ಸವಿದರು. ಬ್ರಹ್ಮರಥೋತ್ಸವ ಪ್ರಯುಕ್ತ ಶ್ರೀರಂಗನಾಥಸ್ವಾಮಿಗೆ ವಜ್ರ ಖಚಿತ ಚಿನ್ನದ ಕಿರೀಟ ಧಾರಣೆ, ವಿಶೇಷ ಹೂವಿನ ಅಲಂಕಾರ ಮಾಡಲಾಯಿತು.

ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ನಾನು ರಾಜಕೀಯಕ್ಕೆ ಪ್ರವೇಶ ಮಾಡಿದ ದಿನದಿಂದ ಇಲ್ಲಿಯವರೆಗೂ ಬ್ರಹ್ಮರಥೋತ್ಸವಕ್ಕೆ ತಪ್ಪಿಸಿಕೊಂಡಿಲ್ಲ. ಅದರಂತೆ ಸುಗ್ಗನಹಳ್ಳಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ, ಸಾವನದುರ್ಗ ಶ್ರೀಲಕ್ಷ್ಮಿನರಸಿಂಹಸ್ವಾಮಿ, ಕರಡಿ ಗುಚ್ಚಮ್ಮ ದೇವಾಲಯಗಳ ಜಾತ್ರಾಮಹೋತ್ಸವದಲ್ಲಿ ಭಾಗವಹಿಸಿ ಭಗವಂತನ ಆಶೀರ್ವಾದ ಪಡೆಯುತ್ತಿದ್ದೇನೆ. ಶ್ರೀರಂಗನಾಥ ಸ್ವಾಮಿ ದನಗಳ ಜಾತ್ರೆಯೂ ವಿಶೇಷವಾಗಿದೆ, ಶ್ರೀರಂಗನಾಥ ಸ್ವಾಮಿಯ ದರ್ಶನ ಪಡೆದರೆ ತಮ್ಮ ಇಷ್ಟಾರ್ಥ ಸಿದ್ದಿಗೊಳ್ಳಲಿದೆ ಎಂಬ ಪ್ರತೀತಿ ಇದೆ. ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಿ ರೈತರು ಸಮೃದ್ಧಿಯಿಂದ ಜೀವನ ನಡೆಸಲು ಅನುವುಮಾಡಿಕೊಡುವಂತೆ ಶ್ರೀರಂಗನಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ನಾಡಿನಲ್ಲಿ ಮಳೆ, ಬೆಳೆಯಾಗಿ ಸುಭೀಕ್ಷವಾಗಿರಲಿ ರೈತರಿಗೆ, ಎಲ್ಲ ವರ್ಗಕ್ಕೂ ಅನುಕೂಲವಾಗಿ ನಾಡಿನ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಸಿಗಲಿ ಎಂದು ಪ್ರಾರ್ಥಿಸಿರುವುದಾಗಿ ತಿಳಿಸಿದರು.

ನಂಜಾವದೂತ ಸ್ವಾಮೀಜಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಬಮೂಲ್ ನಿರ್ದೇಶಕ ನರಸಿಂಹಮೂರ್ತಿ, ಜಿಪಂ ಮಾಜಿ ಸದಸ್ಯರಾದ ಎಂ.ಕೆ.ಧನಂಜಯ, ವಿಜಯ್ ಕುಮಾರ್, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಡಾ. ರಂಗಧಾಮಯ್ಯ, ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ, ಸಮಾಜ ಸೇವಕ ಕೆ.ಭಾಗೇಗೌಡ, ಶೈಲಜಾ, ಬಿಜೆಪಿ ಅಧ್ಯಕ್ಷ ವೀರಭದ್ರ, ಪುರಸಭಾ ಸದಸ್ಯರಾದ ಎಚ್.ಜೆ.ಪುರುಷೋತ್ತಮ್, ಶಿವಕುಮಾರ್, ಎಂ.ಎನ್.ಮಂಜುನಾಥ್, ಮಮತಾ ಗುರುಸ್ವಾಮಿ, ಭಾಗ್ಯಮ್ಮ , ಆಶಾ ರಘು, ವಿಜಯ ರೂಪೇಶ್, ಅನಿಲ್ ಕುಮಾರ್ ಸೇರಿ ಲಕ್ಷಾಂತರ ಭಕ್ತರು ಇದ್ದರು.

ಲಕ್ಷಾಂತರ ಮಂದಿ ಭಾಗಿ

ಭಕ್ತರು ಗೋವಿಂದ....ಗೋವಿಂದ....ಎಂಬ ಘೋಷಣೆ ಕೂಗುತ್ತಾ ಬಾಳೆಹಣ್ಣು ದವನವನ್ನು ರಥಕ್ಕೆ ಎಸೆದು ಭಕ್ತಿ ಭಾವ ಸಮರ್ಪಿಸಿದರು. ಸ್ವಾಮಿಯ ದರ್ಶನಕ್ಕೆ ಬರುವವರ ದಣಿವು ತಣಿಸಲು ಪಟ್ಟಣದಿಂದ ದೇವಾಲಯದವರೆಗೂ ಪಾನಕ ಮಜ್ಜಿಗೆ, ಕೊಸಂಬರಿ ವಿತರಿಸಿದರು. ವಿವಿಧ ಸಮುದಾಯಗಳಿಂದ ಅನ್ನದಾಸೋಹದ ಅರವಟ್ಟಿಗೆಗಳು ಅನ್ನದ ರಂಗನ ಸನ್ನಿಧಿಯಲ್ಲಿ  ಪ್ರತಿವರ್ಷದಂತೆ ಈ ಬಾರಿಯೂ ವಿಶೇಷವಾಗಿತ್ತು. ರಥೋತ್ಸವದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು. ಭಾನುವಾರ ಇದ್ದಿದ್ದರಿಂದ ಈ ಬಾರಿಯೂ ಲಕ್ಷಾಂತರ ಮಂದಿ ಭಾಗವಹಿಸಿದ್ದು ವಿಶೇಷವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net