

ಬೆಂಗಳೂರು: ರಂಗಭೂಮಿ ಕಲೆ ಮತ್ತು ಸಾಹಿತ್ಯ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಬಾಗಲಕೋಟೆ ಜಿಲ್ಲೆಯ ಚಿತ್ತರಗಿಯಲ್ಲಿ ‘ಗಂಗಾಧರ ಶಾಸಿ ಪ್ರತಿಷ್ಠಾನ’ ಮತ್ತು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ‘ಕಂದಗಲ್ ಹನುಮಂತರಾಯರ ವೃತ್ತಿ ರಂಗಭೂಮಿ ಟ್ರಸ್ಟ್’ ಅನ್ನು ರಚಿಸಿದೆ. ಈ ಕುರಿತು ಆದೇಶ ಹೊರಡಿಸಿರುವ ಸರ್ಕಾರ, ಗಂಗಾಧರ ಶಾಸಿ ಪ್ರತಿಷ್ಠಾನಕ್ಕೆ ಗುರು ಬಿ. ಹಿರೇಮಠ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶಿವಕುಮಾರ ಗಂಗಾಧರಶಾಸಿ ಹಿರೇಮಠ, ಅಭಯ ರಾಮ ಮನಗೂಳಿ, ಪರಸಪ್ಪ ಹನುಮಂತಪ್ಪ ಬಿಸಲದಿನ್ನಿ, ವಿಜಯಲಕ್ಷ್ಮೀ ಬಸವರಾಜ ಹಿರೇಮಠ, ಕುಮಾರಸ್ವಾಮಿ ಮುಪ್ಪಯ್ಯ ಹಿರೇಮಠ, ವಿಜಯಕುಮಾರ ಶಿವಮೂರ್ತಯ್ಯ ಕಟಗಿಹಳ್ಳಿಮಠ, ಮಲ್ಲಪ್ಪ ಮಹಾಂತಪ್ಪ ಬಿಸರಡ್ಡಿ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರನ್ನು ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿಯಾಗಿರಲಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ರಚಿಸಿರುವ ಕಂದಗಲ್ ಹನುಮಂತರಾಯರ ವೃತ್ತಿ ರಂಗಭೂಮಿ ಟ್ರಸ್ಟ್‌ಗೆ ಮುಂದಿನ ದಿನಗಳಲ್ಲಿ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.