ಶ್ರೀಪಾದ ಭಟ್‌ಗೆ ‘ರಂಗ ಭೂಪತಿ’ ಪ್ರಶಸ್ತಿ

Sreepad Bhat
Published on

ಬೆಂಗಳೂರು: ನಾಟಕಕಾರ ದಿ. ಗೋಪಾಲ ವಾಜಪೇಯಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ‘ರಂಗ ಭೂಪತಿ’ ಮೊದಲ ವರ್ಷದ ಪ್ರಶಸ್ತಿಗೆ ಹಿರಿಯ ರಂಗ ನಿರ್ದೇಶಕ ಶ್ರೀಪಾದ ಭಟ್ ಆಯ್ಕೆಯಾಗಿದ್ದಾರೆ.

ಧಾರವಾಡದ ಗೋ.ವಾ. ರಂಗ-ಸಂಗ, ಆಟ-ಮಾಟ ಹಾಗೂ ಬೆಂಗಳೂರಿನ ಬಹುರೂಪಿ ಫೌಂಡೇಶನ್ ಸಂಸ್ಥೆಗಳ ಸಹಯೋಗದಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿದ್ದು, ಶನಿವಾರ (ಮಾ.30) ಸಂಜೆ 6.30ಕ್ಕೆ ಧಾರವಾಡದ ರಂಗಾಯಣ ಆವರಣದಲ್ಲಿರುವ ಪಂಡಿತ್ ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಹಿರಿಯ ಸಾಹಿತಿ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ರಂಗಕರ್ಮಿ ಧನಂಜಯ ಕುಲಕರ್ಣಿ, ಬಹುರೂಪಿ ಫೌಂಡೇಶನ್ ಮುಖ್ಯಸ್ಥ ಜಿ.ಎನ್. ಮೋಹನ್, ರವಿ ಕುಲಕರ್ಣಿ ಇತರರು ಪಾಲ್ಗೊಳ್ಳಲಿದ್ದಾರೆ.

ಅಂದು ಗೋಪಾಲ ವಾಜಪೇಯಿ ರಚಿಸಿದ ರಂಗಗೀತೆಗಳ ಹಬ್ಬ ಆಯೋಜಿಸಲಾಗಿದ್ದು, ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನಹಡಗಲಿಯ ಕೆ.ಎಂ. ಶಶಿಧರ, ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ರಾಜಕುಮಾರ ಮಡಿವಾಳರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net