ಆರ್. ಶಂಕರ ಕಚೇರಿಯಲ್ಲಿದ್ದ ಸೀರೆ, ತಟ್ಟೆ, ಲೋಟ ಜಪ್ತಿ; ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ಎಫ್‌ಐಆರ್

17-RNR-01 - Copy
Published on

ರಾಣೆಬೆನ್ನೂರ: ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಆರ್. ಶಂಕರ ಕಚೇರಿಯಲ್ಲಿಟ್ಟಿದ್ದ ಸೀರೆ, ತಟ್ಟೆ, ಲೋಟ ಹಾಗೂ ಸ್ಕೂಲ್ ಬ್ಯಾಗ್‌ಗಳನ್ನು ಅಕ್ರಮ ದಾಸ್ತಾನು ಆರೋಪದಡಿ ಶುಕ್ರವಾರ ಪೊಲೀಸರು ಜಪ್ತಿ ಮಾಡಿದ್ದು, ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇಲ್ಲಿಯ ಬೀರೇಶ್ವರ ನಗರದಲ್ಲಿರುವ ಶಂಕರ ಅವರ ಕಚೇರಿಗೆ ಬೆಳಗ್ಗೆ ಬಂದ ಪೊಲೀಸರು ಕೋಟ್ಯಂತರ ರೂ. ಮೌಲ್ಯದ ಆರ್. ಶಂಕರ ಚಿತ್ರವಿದ್ದ ಸೀರೆ, ತಟ್ಟೆ, ಲೋಟ, ಸ್ಕೂಲ್ ಬ್ಯಾಗ್‌ಗಳನ್ನು ಜಪ್ತಿ ಮಾಡಿದರು. ಎಲ್ಲ ಸಾಮಗ್ರಿಗಳನ್ನು ದೊಡ್ಡ ದೊಡ್ಡ ಚೀಲಗಳಲ್ಲಿ ಪ್ಯಾಕ್ ಮಾಡಿ ಲಾರಿ, ಟಾಟಾಎಎಸ್ ವಾಹನದ ಮೂಲಕ ಶಹರ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು.
ಮಾ. 14ರಂದು ಶಂಕರ ಕಚೇರಿ ಮೇಲೆ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ಕಚೇರಿಯಲ್ಲಿದ್ದ ವಸ್ತುಗಳಿಗೆ ಎರಡು ದಿನದಲ್ಲಿ ಬಿಲ್ ನೀಡುವಂತೆ ಸೂಚಿಸಿದ್ದರು. ಆದರೆ, ಆರ್. ಶಂಕರ ಇನ್ನೂ ಬಿಲ್ ನೀಡದ ಕಾರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ತಹಸೀಲ್ದಾರ್ ಗುರುಬಸವರಾಜ ಶಂಕರ ವಿರುದ್ಧ ದೂರು ನೀಡಿದ್ದು, ಆರ್. ಶಂಕರ ಚುನಾವಣೆ ಸಮೀಪದ ದಿನದಲ್ಲಿ ರಾಣೆಬೆನ್ನೂರ ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿ ಹಿಡಿದು ಕುಕ್ಕರ್, ಸೀರೆ ಹಂಚಿಕೆ ಮಾಡಿದ್ದಾರೆ. ಆ ಮೂಲಕ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದ್ದಾರೆ. ಕಲಂ 171ಇ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net