ರಾಣೆಬೆನ್ನೂರ: ಮಕ್ಕಳಿಗೆ ಹೊಡೆಯುವುದು ಸರಿಯಲ್ಲ ಎಂದು ಬುದ್ಧಿ ಮಾತು ಹೇಳಿದ್ದಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿಯ ಮಾರುತಿ ನಗರದಲ್ಲಿ ಗುರುವಾರ ಸಂಭವಿಸಿದೆ.
ಸೌಮ್ಯಾ ಮಂಜುನಾಥ ಮೀರಜಕರ (28) ಮೃತಳು.
ಈಕೆಯ 4 ವರ್ಷದ ಮಗ ಆಟವಾಡುವ ಸಮಯದಲ್ಲಿ ಬೇರೆ ಮಕ್ಕಳೊಂದಿಗೆ ಜಗಳ ಮಾಡಿಕೊಂಡಿದ್ದ. ಇದರಿಂದಾಗಿ ಸೌಮ್ಯ ಮಗನನ್ನು ಹೊಡೆದಿದ್ದಳು. ಆದ್ದರಿಂದ ಆಕೆಯ ಪತಿ ಹಾಗೂ ತವರು ಮನೆಯವರು ಈ ರೀತಿ ಮಕ್ಕಳಿಗೆ ಹೊಡೆಯುವುದು ಸರಿಯಲ್ಲ ಎಂದು ಬುದ್ಧಿ ಮಾತು ಹೇಳಿದ್ದರು. ಇದರಿಂದ ಸಿಟ್ಟಾದ ಸೌಮ್ಯ ತನ್ನ ಹೊಸ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.