ಸಂಭ್ರಮ ಸಡಗರದಿಂದ ಶ್ರೀರಾಮನವಮಿ ಆಚರಣೆ

30-RNR-04
Published on

ರಾಣೆಬೆನ್ನೂರ: ಮರ್ಯಾದಾ ಪುರುಷೋತ್ತಮ ಶ್ರೀರಾಮ ನವಮಿಯನ್ನು ಗುರುವಾರ ನಗರದ ವಿವಿಧೆಡೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಇಲ್ಲಿನ ಸಂಗಮ ವೃತ್ತದಲ್ಲಿ ಶ್ರೀ ರಾಮನ ದೇವಸ್ಥಾನದಲ್ಲಿ ರಾಮನವಮಿ ಅಂಗವಾಗಿ ತೊಟ್ಟಿಲು ಕಟ್ಟಿ ಹೂವುಗಳಿಂದ ಅಲಂಕರಿಸಿ ಅದರಲ್ಲಿ ಶ್ರೀರಾಮನ ಪ್ರತೀಕವಾಗಿ ತೆಂಗಿನಕಾಯಿ ಇಟ್ಟು ಪೂಜೆ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಗೆ ಸುಮಂಗಲಿಯರು ತೊಟ್ಟಿಲು ತೂಗುವ ಮೂಲಕ ಹೆಸರಿಡುವ ಶಾಸ್ತ್ರ ಮಾಡಿದರು.
ಇದಲ್ಲದೆ ಮಾರುತಿ ನಗರದ ಶ್ರೀರಾಮ ಮಂದಿರ, ಕೋಟೆ ಪ್ರದೇಶದ ರಾಮದೇವರ ಗುಡಿ, ಅಶ್ವಥ ಮಾರುತಿ ದೇವಸ್ಥಾನ, ಕೆಇಬಿ ವಿನಾಯಕ ದೇವಸ್ಥಾನ, ವಿನಾಯಕನಗರದ ವಿನಾಯಕ ದೇವಸ್ಥಾನಗಳಲ್ಲಿಯೂ ಶ್ರೀರಾಮ ನವಮಿಯನ್ನು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು. ಎಲ್ಲ ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ಕೊಸಂಬರಿ, ಪಾನಕ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net