ಬಿಜೆಪಿ ಗೆಲ್ಲಿಸಲು ಪ್ರಕಾಶಗೆ ಟಿಕೆಟ್ ನೀಡಲಾಗಿದೆ; ಜಟ್ಟೆಪ್ಪ ಕರೇಗೌಡ್ರ ಆರೋಪ

27-RNR-05
Published on

ರಾಣೆಬೆನ್ನೂರ: 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಬೇಕು ಎಂಬ ಉದ್ದೇಶದಿಂದ ಪ್ರಕಾಶ ಕೋಳಿವಾಡಗೆ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಇದು ಹೈಕಮಾಂಡ್ ಗಮನಕ್ಕೂ ಬಂದಿದ್ದು, ಟಿಕೆಟ್‌ನಲ್ಲಿ ಅವರ ಹೆಸರು ಘೋಷಿಸಿದ್ದರೂ ಬಿಫಾರ್ಮ್ ನನಗೆ ದೊರೆಯುವ ವಿಶ್ವಾಸವಿದೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಟ್ಟೆಪ್ಪ ಕರೇಗೌಡ್ರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕಾಶ ಕೋಳಿವಾಡ ಅವರಿಗೆ ಟಿಕೆಟ್ ನೀಡಿರುವುದು ತೀವ್ರ ಬೇಸರ ಉಂಟು ಮಾಡಿದೆ. ಕೆ.ಬಿ. ಕೋಳಿವಾಡರು ಹಿರಿಯರಾಗಿ ಪುತ್ರ ವ್ಯಾಮೋಹದಿಂದ ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಕುಟುಂಬ ರಾಜಕಾರಣವಾಗಿದೆ ಎಂದು ಆರೋಪಿಸಿದರು.
ಕಳೆದ 50 ವರ್ಷಗಳಿಂದ ರಾಜಕೀಯ ಮಾಡುತ್ತ ಬಂದಿರುವ ಕೆ.ಬಿ. ಕೋಳಿವಾಡರು ಈವರೆಗೂ ಒಬ್ಬ ನಾಯಕನನ್ನೂ ಬೆಳೆಸಿಲ್ಲ. ಇದು ಅವರ ಸ್ವಾರ್ಥ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವರ ಪುತ್ರ ಗೆಲ್ಲುವಂತಹ ವ್ಯಕ್ತಿಯಲ್ಲ ಎಂಬುದು ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವುದನ್ನು ನೋಡಿದರೆ ತಿಳಿಯುತ್ತದೆ. ಈಗಲೂ ನನಗೆ ಹೈಕಮಾಂಡ್ ಮೇಲೆ ನಂಬಿಕೆಯಿದ್ದು, ಬಿ ಫಾರ್ಮ ನನಗೆ ಸಿಗುತ್ತದೆ ಎಂಬ ಭರವಸೆಯಿದೆ ಎಂದರು.
ಪಕ್ಷದ ಹಿರಿಯರು ಸೂಕ್ತವಾಗಿ ಪರಿಶೀಲಿಸಿ ಪ್ರಕಾಶ ಕೋಳಿವಾಡರನ್ನು ಬಿಟ್ಟು ಪಕ್ಷಕ್ಕೆ ದುಡಿದ ಪ್ರಾಮಾಣಿಕ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೆ ಪಕ್ಷ ಗೆಲ್ಲುವುದು ನೂರಕ್ಕೆ ನೂರಷ್ಟು ಸತ್ಯ. ಬದಲಾವಣೆಯಾದರೆ ಮಾತ್ರ ರಾಣೆಬೆನ್ನೂರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಅನುಮಾನವೇ ಇಲ್ಲ. ನಾನು ಎಂದಿಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿಯೇ ಇರುತ್ತೇನೆ. ನಾನೊಬ್ಬ ಕಾಂಗ್ರೆಸ್ಸಿಗನಾಗಿದ್ದು ಪಕ್ಷಕ್ಕೆ ದ್ರೋಹ ಮಾಡಲಾರೆ. ಆದರೆ, ಪಕ್ಷದ ತೀರ್ಮಾನದಿಂದ ನನ್ನ ಕಾರ್ಯಕರ್ತರಿಗೆ ಅಸಮಧಾನವಾಗಿದ್ದು ಅವರನ್ನು ತಡೆಯಲು ನನಗೆ ಸಾಧ್ಯವಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net