ಪತ್ನಿಗೆ ಕಿರುಕುಳ ನೀಡಿದ ಪತಿಗೆ ಜೈಲು ಶಿಕ್ಷೆ; ಮಕ್ಕಳಿಗೆ ಪಾಠ ಮಾಡುವ ಶಿಕ್ಷಕ ಈತ

Published on

ರಾಣೆಬೆನ್ನೂರ: ಪತ್ನಿಯ ಜತೆ ವೈವಾಹಿಕ ಜೀವನ ನಿರಾಕರಿಸಿ ಆಕೆಗೆ ಕಿರುಕುಳ ನೀಡಿದ ಪತಿಗೆ ೬ ತಿಂಗಳು ಕಠಿಣ ಜೈಲು ಶಿಕ್ಷೆ ಹಾಗೂ ೫ ಸಾವಿರ ರೂ. ದಂಡ ವಿಧೀಸಿ ಇಲ್ಲಿಯ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಿ. ಸಿದ್ಧರಾಜು ಮಂಗಳವಾರ ತೀರ್ಪು ನೀಡಿ ಆದೇಶಿಸಿದ್ದಾರೆ.
ತಾಲೂಕಿನ ಬೆನಕನಕೊಂಡ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಶರೀಫಸಾಬ ಜಮಾಲಸಾಬ ಬಿದರಿ ಶಿಕ್ಷೆಗೆ ಒಳಗಾದ ಅಪರಾಧೀ
ಈತ ೨೦೧೫ ಅಕ್ಟೋಬರ್ ೧೫ರಂದು ತಮನಬಾನು ಎಂಬುವವಳನ್ನು ಮದುವೆ ಮಾಡಿಕೊಂಡು ಅವಳನ್ನು ಸರಿಯಾಗಿ ನೋಡಿಕೊಳ್ಳದೆ, ಅವಳಿಗೆ ಸರಿಯಾಗಿ ಊಟ, ಬಟ್ಟೆ ಕೊಡದೆ ಕಿರುಕುಳ ನೀಡಿದ್ದಾನೆ. ನೀನು ದುಡಿದುಕೊಂಡು ಬಾ, ಕೆಲಸಕ್ಕೆ ಹೋಗಿ ಹಣ ತಂದರೆ ಮಾತ್ರ ನೀನು ನನ್ನೊಂದಿಗೆ ಇರಲು ಸಾಧ್ಯ ಅಂತಾ ಹಣಕ್ಕಾಗಿ ಪೀಡಿಸಿದ್ದಾನೆ.
ಅಲ್ಲದೆ ಆಕೆಯೊಂದಿಗೆ ವೈವಾಹಿಕ ಜೀವನವನ್ನು ನಿರಾಕರಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ್ದಾನೆ. ಈ ಕುರಿತು ಪತ್ನಿಯೂ ಹಲಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಸಾಕ್ಷ್ಯಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧೀಗೆ ಶಿಕ್ಷೆ ವಿಧೀಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮಧುಮತಿ ಸಿದ್ನೂರಕರ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net