ಕಾರು ರೀಪೇರಿ ಮಾಡಲು ಹೋಗಿದ್ದ ಮೆಕ್ಯಾನಿಕ್ ಲಾರಿ ಡಿಕ್ಕಿಯಾಗಿ ಸಾವು

26-RNR-04 shankar gulaganji
Published on

ರಾಣೆಬೆನ್ನೂರ: ಕೆಟ್ಟು ನಿಂತಿದ್ದ ಕಾರು ರೀಪೇರಿ ಮಾಡಲು ಹೋಗಿದ್ದ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟು, ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹಲಗೇರಿ ಸೇತುವೆ ಬಳಿಯ ಎನ್‌ಎಚ್-48ರಲ್ಲಿ ಸಂಭವಿಸಿದೆ.
ಇಲ್ಲಿಯ ಸಿದ್ದೇಶ್ವರ ನಗರದ ಗುಲಗಂಜಿ ಕಾರ್ ಸರ್ವೀಸ್ ಸೆಂಟರ್‌ನ ಮಾಲೀಕ ಶಂಕರ ಬಸವರಾಜ ಗುಲಗಂಜಿ (28) ಮೃತ ವ್ಯಕ್ತಿ. ಕಾರಿನಲ್ಲಿದ್ದ ಧಾರವಾಡದ ನಿವಾಸಿ ನಾಗರಾಜ ಹಾಗೂ ಶಾರದಾ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗರಾಜ ಹರಿಹರ ಕಡೆಯಿಂದ ಧಾರವಾಡದ ಕಡೆಗೆ ಹೊರಟಿದ್ದರು. ಈ ಸಮಯದಲ್ಲಿ ಕಾರು ಕೆಟ್ಟು ನಿಂತಿದೆ. ಹೆದ್ದಾರಿಯಲ್ಲಿ ಪೆಟ್ರೋಲಿಂಗ್ ಮಾಡುತ್ತಿದ್ದ ಪೊಲೀಸರನ್ನು ವಿಚಾರಿಸಿದಾಗ ಪೊಲೀಸರು ಶಂಕರನ ಮೊಬೈಲ್ ನಂಬರ್ ಕೊಟ್ಟಿದ್ದಾರೆ. ಶಂಕರ ಸ್ಥಳಕ್ಕೆ ಬಂದು ಕಾರು ರೀಪೇರಿ ಮಾಡಿ ಮಾಲೀಕರಿಗೆ ಕೀ ಕೊಡುತ್ತಿದ್ದ ಸಮಯದಲ್ಲಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಶಂಕರ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸ್ಥಳೀಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net