ರೆಡ್ ವಲಯದಲ್ಲಿ ರಾಂಡಂ ಟೆಸ್ಟ್: ಹೊಂಗಸಂದ್ರ, ಪಾದರಾಯನ ಪುರದಲ್ಲಿ ಆರಂಭ ಅಗತ್ಯ ಸೇವೆ ಪಡೆಯಲು ಕರಪತ್ರಗಳ ಹಂಚಿಕೆ

BBMP
Published on

ಬೆಂಗಳೂರು: ಕರೊನಾ ಸೋಂಕಿತರ ಸಂಖ್ಯೆ ಬೆಂಗಳೂರಿನಲ್ಲಿ ಕಳೆದ 4 ದಿನಗಳು ಸತತವಾಗಿ ಏರಿಕೆಯಾಗುತ್ತಿತ್ತು. ಭಾನುವಾರ ಯಾವುದೇ ಸೋಂಕಿನ ಪ್ರಕರಣಗಳು ವರದಿಯಾಗಿಲ್ಲ. ಆದರೂ ಬಿಬಿಎಂಪಿ ಕೆಂಪು ವಲಯದಲ್ಲಿರುವ ಸೋಂಕಿನ ಲಕ್ಷಣ ಇಲ್ಲವಾದರಿಗೂ ರ್ಯಾಂಡಮ್ ಕರೊನಾ ಪರೀಕ್ಷೆ ಮಾಡಲು ಮುಂದಾಗಿದೆ.

ಹೊಂಗಸಂದ್ರ, ಪಾದರಾಯನಪುರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿತ್ತು. ಭಾನುವಾರ ಸೋಂಕಿತರು ವರದಿಯಾಗದ ಕಾರಣ ಬಿಬಿಎಂಪಿಗೆ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಹೊಂಗಸಂದ್ರದ ವಿದ್ಯುಜ್ಯೋತಿ ನಗರದಲ್ಲಿ 6 ವರ್ಷದ ಮಗು ಸೇರಿ ಒಟ್ಟು 30 ಸೋಂಕಿತ ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಯಾರೊಬ್ಬರೂ ತಪ್ಪಿಸಿಕೊಳ್ಳದಂತೆ ತಪಾಸಣೆ ಆರಂಭಿಸಲಾಗಿದೆ.

ಬಿಹಾರ ಮೂಲದ ಕಾರ್ವಿುಕರು ನೆಲೆಸಿದ್ದ ಸುತ್ತಮುತ್ತಲಿನ ಮನೆಗಳಲ್ಲಿ ನೆಲೆಸಿದ್ದ 71 ಜನರಿಗೆ ಕರೊನಾ ಸೋಂಕು ಪರೀಕ್ಷೆ ಮಾಡಲಾಗುತ್ತದೆ. ಈಗಾಗಲೇ ಸೋಂಕಿತರು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದವರು ನೆಲೆಸಿದ್ದ ಕಟ್ಟಡಗಳ ಸಮೀಪದ ಕೆಲವು ಮನೆಗಳ 71 ಜನರನ್ನು ಪ್ರತ್ಯೇಕ ಕ್ವಾರಂಟೈನ್ ಮಾಡಲಾಗಿದೆ. ಇವರಿಗೆ ಹಂತಹಂತವಾಗಿ ಕರೊನಾ ಪರೀಕ್ಷೆ ಮಾಡಲಾಗುವುದು ಎಂದು ಬೊಮ್ಮನಹಳ್ಳಿ ವಿಶೇಷ ಆಯುಕ್ತ ಲೋಕೇಶ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ಅಗತ್ಯ ಸೇವೆಗೆ ಕರಪತ್ರ ಹಂಚಿಕೆ: ಹೊಂಗಸಂದ್ರದ ಕಂಟೈನ್ಮೆಂಟ್ ಪ್ರದೇಶದಲ್ಲಿ 1,217 ಮನೆಗಳಿದ್ದು, 3,400 ಜನರು ವಾಸವಾಗಿದ್ದಾರೆ. ಎಲ್ಲರಿಗೂ ಅರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಅಗತ್ಯವಿದ್ದ 810 ಮನೆಗಳಿಗೆ ಬಿಬಿಎಂಪಿಯಿಂದ ದಿನಸಿ ಕಿಟ್ ವಿತರಿಸಲಾಗಿದೆ.

ತರಕಾರಿ, ದಿನಸಿ ಹಾಗೂ ಔಷಧ ಖರೀದಿಗೆ ಸಂಬಂಧಿಸಿದ ಹತ್ತಿರದ ಅಂಗಡಿಗಳ ಮೊಬೈಲ್ ನಂಬರ್ ಹೊಂದಿರುವ ಕರಪತ್ರ ನೀಡಲಾಗಿದೆ. ಅಗತ್ಯ ಇದ್ದವರು ಕರೆ ಮಾಡಿದರೆ ಅವರ ಮನೆಗೆ ಸೇವೆ ಒದಗಿಸಲಾಗುತ್ತದೆ. ಬಿಹಾರಿ ಕಾರ್ವಿುಕರ ಮನೆಗಳು ಹಾಗೂ ಕಂಟೈನ್ಮೆಂಟ್ ಪ್ರದೇಶದಲ್ಲಿ ಪೌರ ಕಾರ್ವಿುಕರಿಗೆ ರಕ್ಷಣಾ ಕವಚ ನೀಡಿ ಕಸ ಸಂಗ್ರಹಿಸಲಾಗುತ್ತಿದೆ ಹಾಗೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ ಎಂದು ಬೊಮ್ಮನಹಳ್ಳಿ ವಲಯ ಕಮಾಂಡಿಂಗ್ ಅಧಿಕಾರಿ ಎಚ್. ಬಾಳಪ್ಪ ತಿಳಿಸಿದ್ದಾರೆ.

ಸಮುದಾಯ ಸೋಂಕು ಪತ್ತೆಗೆ ಸಹಕಾರಿ: ಪಾದರಾಯನಪುರದಲ್ಲಿ ದ್ವಿತೀಯ ಸಂರ್ಪತರಲ್ಲೂ ಕರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಈ ಭಾಗದಲ್ಲಿನ 22 ಜನರಿಗೆ ಕರೊನಾ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಈ ರೀತಿ ತಪಾಸಿಸುವುದರಿಂದ ಸೋಂಕು ಸಮುದಾಯಕ್ಕೆ ಹಬ್ಬಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೆ, ಸೋಂಕು ಪತ್ತೆಯಾದ ಹಲವರಲ್ಲಿ ಸೋಂಕಿನ ಲಕ್ಷಣಗಳಿರದ ಹಿನ್ನೆಲೆಯಲ್ಲಿ ರೆಡ್ ಝೋನ್​ಗಳಲ್ಲಿ ರ್ಯಾಂಡಮ್ ತಪಾಸಣೆ ಮಾಡಲಾಗುತ್ತಿದೆ.

ದ್ವಿತೀಯ ಸಂಪರ್ಕಿತರ ಕ್ವಾರಂಟೈನ್ ಪಟ್ಟಿ: ಆರ್.ಆರ್. ನಗರದ ನಿವಾಸಿ ಖಾಸಗಿ ಸುದ್ದಿವಾಹಿನಿ ಕ್ಯಾಮರಾಮನ್​ಗೆ ಸೋಂಕು ತಗುಲಿದ ಪ್ರಕರಣಕ್ಕೆ ಸಂಬಂಧಿಸಿ 38 ಜನರನ್ನು ಪ್ರಾಥಮಿಕ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಈಗ ದ್ವಿತೀಯ ಸಂಪರ್ಕಿತರ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ಸೋಮವಾರದಿಂದ ಅವರನ್ನೂ ಕ್ವಾರಂಟೈನ್ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net