

ರಾಮನಗರ: ರಾಮದೇವರ ಬೆಟ್ಟ ಏಷ್ಯಾಖಂಡದಲ್ಲೇ ಪ್ರಥಮ ರಣಹದ್ದು ಧಾಮವಾಗಿದ್ದು, ಅಂತೆಯೇ, ರಣಹದ್ದುಗಳ ಸಂತಾನ ಹೆಚ್ಚಿಸುವ ನಿಟ್ಟಿನಲ್ಲಿ ಬನ್ನೇರುಟ್ಟದಲ್ಲಿ ನಿರ್ಮಿಸಿರುವ ಬ್ರೀಡಿಂಗ್ ಸೆಂಟರ್ ಶ್ರೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ ತಿಳಿಸಿದರು.
ರಾಮನಗರದ ಸಾಹಸ ಕಲಾ ಶಿಕ್ಷಣ ಕೇಂದ್ರದಲ್ಲಿ ಕರ್ನಾಟಕ ಅರಣ್ಯ ಇಲಾಖೆ, ರಾಮನಗರ ಪ್ರಾದೇಶಿಕ ವಿಭಾಗ, ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ರಣಹದ್ದು ಜಾಗೃತಿ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ರಾಮದೇವರ ಬೆಟ್ಟದ ರಣಹದ್ದು ವನ್ಯಜಿವಿಧಾಮದಲ್ಲಿಯೇ ಬ್ರೀಡಿಂಗ್ ಸೆಂಟರ್ ತೆರೆಯಲು ಯೋಜನೆ ರೂಪಿಸಲಾಗಿತ್ತು. ಆದರೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಈ ಬ್ರೀಡಿಂಗ್ ಸೆಂಟರ್ ಅನ್ನು ಬನ್ನೇರುಟ್ಟದಲ್ಲಿ ತೆರೆಯಲಾಗುತ್ತಿದೆ ಎಂದರು.
ರಾಮದೇವರ ಬೆಟ್ಟದಲ್ಲಿ ರಿಲೀಸಿಂಗ್ ಸೆಂಟರ್ ತೆರೆಯಲಾಗುತ್ತದೆ. ಬನ್ನೇರುಟ್ಟದಲ್ಲಿ ಸಿದ್ಧವಾದ ರಣಹದ್ದು ಮರಿಗಳನ್ನು ರಾಮನಗರದ ರಾಮದೇವರ ಬೆಟ್ಟದಲ್ಲಿ ಬಿಡಲಾಗುತ್ತದೆ. ರಣಹದ್ದು ಬ್ರೀಡಿಂಗ್ ಸೆಂಟರ್ ನವೆಂಬರ್ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ ಎಂದು ತಿಳಿಸಿದರು.