

ಅರಕಲಗೂಡು: ತಾಲೂಕಿನ ಮಣಜೂರು ಗ್ರಾಮದಲ್ಲಿ ಬೆಟ್ಟದ ಶ್ರೀ ರಂಗನಾಥಸ್ವಾಮಿ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ದಾಸನಪುರ- ಮಣಜೂರು ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಹಬ್ಬದ ಸಡಗರ ಮನೆ ಮಾಡಿದೆ. ಐತಿಹಾಸಿಕ ಬೆಟ್ಟದ ಮೇಲಿರುವ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳು ಕಳೆಗಟ್ಟಿದ್ದು ಸಹಸ್ರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು. ಭಾನುವಾರ ಬೆಳಗ್ಗೆ ಮೂಲ ದೇವರಿಗೆ ಅಭಿಷೇಕ, ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ನಂತರ ಮಣಜೂರಿನಲ್ಲಿ ಸಿಂಗರಿಸಿದ್ದ ರಥದ ಮೇಲೆ ದೇವರ ಮೂರ್ತಿ ಪ್ರತಿಷ್ಠಾಪಿಸಿ ಭಕ್ತರು ತೇರು ಎಳೆದು ಸಂಭ್ರಮಿಸಿದರು. ರಥೋತ್ಸವದಲ್ಲಿ ಸುತ್ತಲಿನ ಗ್ರಾಮಗಳ ಜನರು ಭಾಗವಹಿಸಿದ್ದರು. ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.