

ಯಳಂದೂರು: ಪಟ್ಟಣದ ದೇವಾಂಗ ಬೀದಿಯಲ್ಲಿರುವ ಶ್ರೀರಾಮಮಂದಿರದಲ್ಲಿ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ ಭಾನುವಾರ ಸಂಭ್ರಮ ಸಡಗರಗಳಿಂದ ನೆರವೇರಿತು.
ಶ್ರೀರಾಮಮಂದಿರ ಜಿಲ್ಲೆಯ ಪುರಾತನ ರಾಮಮಂದಿರಗಳಲ್ಲಿ ಒಂದಾಗಿದೆ. ನೂರಾರು ವರ್ಷಗಳಿಂದಲೂ ಇಲ್ಲಿ ರಾಮೋತ್ಸವ ಆಚರಿಸುವ ವಾಡಿಕೆ ಇದೆ. ರಾಮನವಮಿಯ ದಿನ ಶ್ರೀರಾಮ ದೇವರ ಪಟವನ್ನಿಟ್ಟು ವಿಶೇಷ ಪೂಜೆ ಮಾಡಿ ಪಟ್ಟಾಭಿಷೇಕ ಮಹೋತ್ಸವ ಹಮ್ಮಿಕೊಳ್ಳುವ ಸಂಪ್ರದಾಯ ಅನಾದಿ ಕಾಲದಿಂದಲೂ ರೂಢಿಯಲ್ಲಿದೆ.
ಈ ದೇಗುಲಕ್ಕೆ ಬೆಂಗಳೂರು, ತಮಿಳುನಾಡು ಸೇರಿದಂತೆ ಹಲವು ಕಡೆಗಳಲ್ಲೂ ಭಕ್ತರಿದ್ದು, ಪಟ್ಟಾಭಿಷೇಕದ ಸಮಯಲ್ಲಿ ಎಲ್ಲರೂ ಆಗಮಿಸಿ ಪೂಜೆ ಸಲ್ಲಿಸುವ ವಾಡಿಕೆ ಇದೆ.
ಅದರಂತೆ ಭಾನುವಾರ ನಡೆದ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ದೇಗುಲದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ದೇಗುಲವನ್ನು ಹಾಗೂ ದೇವಾಂಗ ಬೀದಿಯನ್ನು ತಳಿರು, ತೋರಣ ಸಿಂಗರಿಸಲಾಗಿತ್ತು. ಬೆಳಗ್ಗೆಯಿಂದಲೇ ವಿಶೇಷ ಪೂಜೆ ಹೋಮ ಹವನಗಳನ್ನು ನೆರವೇರಿಸಲಾಯಿತು.
ವಿಶೇಷ ಬಗೆಯ ಹಣ್ಣು, ದವಸ, ಧಾನ್ಯಗಳನ್ನಿಟ್ಟು ಪೂಜಿಸಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ಮಾಡುವ ಮೂಲಕ ಪೂಜಾ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಲಾಯಿತು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ಹಾಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ನೂರಾರು ಭಕ್ತರು ಭಾಗವಹಿಸುವ ಮೂಲಕ ಭಕ್ತಿ ಮೆರೆದರು. ರಾಮಮಂದಿರದ ಆಡಳಿತ ಮಂಡಳಿ ವತಿಯಿಂದ ಧಾರ್ಮಿಕ ವಿಧಿಗಳನ್ನು ಸಂಪನ್ನಗೊಳಿಸಲಾಯಿತು.