

* ಎಚ್‌ಡಿ, ಡಿಕೆಶಿ ಕುಟುಂಬ ರಾಜಕೀಯ ಜಂಗೀಕುಸ್ತಿ ಆರಂಭಗೊಳ್ಳುವ ಮುನ್ಸೂಚನೆ
ಗಂಗಾಧರ್ ಬೈರಾಪಟ್ಟಣ ರಾಮನಗರ
ಕಳೆದ ಕೆಲವು ತಿಂಗಳಿಂದ ತಣ್ಣಗಿದ್ದ ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿವಾದ ಈಗ ಮತ್ತೆ ಮುನ್ನೆಲೆಗೆ ಬಂದಿದೆ.
ಚನ್ನಪಟ್ಟಣದಲ್ಲಿ ಬುಧವಾರ ಮಾತನಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಎರಡು ದಿನ ಕಾದು ನೋಡಿ, ಬೆಂಗಳೂರು ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಸಿಗುತ್ತದೆ ಎನ್ನುವ ಮೂಲಕ ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ.
ಇದರೊಂದಿಗೆ ಮತ್ತೊಮ್ಮೆ ಎಚ್‌ಡಿ ದೇವೇಗೌಡ ಮತ್ತು ಡಿ.ಕೆ.ಶಿವಕುಮಾರ್ ಕುಟುಂಬದ ನಡುವಿನ ರಾಜಕೀಯ ಜಂಗೀಕುಸ್ತಿ ಆರಂಭಗೊಳ್ಳುವ ಮುನ್ಸೂಚನೆ ನೀಡಿದೆ.
ನಾವೆಲ್ಲ ಬೆಂಗಳೂರು ಜಿಲ್ಲೆಯವರು. ನಮ್ಮ ಟೆಕ್ಸ್‌ಬುಕ್‌ಗಳನ್ನು ತೆಗೆದುನೋಡಿ ಆಗ ಗೊತ್ತಾಗುತ್ತದೆ. ರಾಮನಗರ, ಮಾಗಡಿ, ಕನಕಪುರ ಎಲ್ಲ ಬೆಂಗಳೂರು ಗ್ರಾಮಾಂತರ. ಈಗ ಚನ್ನಪಟ್ಟಣವೂ ಬೆಂಗಳೂರಿಗೆ ಸೇರುತ್ತದೆ. ಇದು ರಾಮನಗರ ಡಿವಿಜನ್ ಅಂತಾನೆ ಇರುತ್ತದೆ. ಆದರೆ, ಎಲ್ಲ ಬೆಂಗಳೂರಿಗೆ ಸೇರುತ್ತದೆ. ಇನ್ನೆರಡು ದಿನ ಕಾದು ನೋಡಿ, ಇದಕ್ಕೆ ಉತ್ತರ ಸಿಗುತ್ತದೆ ಎನ್ನುವ ಮೂಲಕ ರಾಮನಗರ ಬೆಂಗಳೂರು ಸೇರ್ಪಡೆ ಬಗ್ಗೆ ಚನ್ನಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ಪುನರುಚ್ಚರಿಸಿದ್ದರು.
ಹಲವು ವರ್ಷಗಳಿಂದಲೂ ರಾಮನಗರ ಜಿಲ್ಲೆಗೆ ಮರು ನಾಮಕರಣ ಮಾಡಬೇಕು ಎನ್ನುವ ಚರ್ಚೆಗಳ ನಡುವೆಯೇ, ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ವಿವಾದದ ಅಲೆ ಎಬ್ಬಿಸಿದೆ. 2007ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಹೊರಬಂದು ರಾಮನಗರ ಉದಯವಾದಾಗಿನಿಂದಲೂ ಹೆಸರಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಲೇ ಇವೆ. ಬೆಂಗಳೂರು ದಕ್ಷಿಣ, ನವ ಬೆಂಗಳೂರು, ನವ ರಾಮನಗರ ಹೀಗೆ ಹಲವು ಹೆಸರುಗಳನ್ನು ಇಡಬೇಕಿತ್ತು ಎನ್ನುವ ಅಭಿಪ್ರಾಯಗಳು ವ್ಯಕ್ತವಾಗುತ್ತಲೇ ಇದ್ದು, ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ಹಿಂದಿನಿಂದಲೂ ಮುಂಚೂಣಿಯಲ್ಲಿ ಇದ್ದಾರೆ.
ಬೆಂಗಳೂರು ವಿಶ್ವ ಭೂಪಟದಲ್ಲಿ ಸ್ಥಾನ ಪಡೆದ ನಗರ. ಬೆಂಗಳೂರಿಗೆ ಹೊಂದಿಕೊಂಡಂತೆ ಬಿಡದಿ ಕೈಗಾರಿಕೆ ಪ್ರದೇಶವಿದ್ದು, ಹಲವು ಬಹುರಾಷ್ಟ್ರೀಯ ಕಂಪನಿಗಳು ನೆಲೆ ಕಂಡುಕೊಂಡಿವೆ. ಇವುಗಳಲ್ಲಿ ಕೆಲವು ಕಂಪನಿಗಳು ಬಿಡದಿಯನ್ನು ಬೆಂಗಳೂರು ಎಂದು ನಮೂದಿಸುತ್ತಿದ್ದಾರೆ. ಬೆಂಗಳೂರು ಬಿಡದಿಯ ಆಸುಪಾಸಿಗೆ ವಿಸ್ತರಣೆ ಆಗಿದೆ.
ರಾಮನಗರದ ಹೆಸರು ಬದಲಾವಣೆ ಮಾಡಿದರೆ, ಇಲ್ಲಿನ ಭೂಮಿಗೆ ಬೇಡಿಕೆ ಹೆಚ್ಚಲಿದೆ ಎನ್ನುವುದು ಡಿ.ಕೆ.ಶಿವಕುಮಾರ್ ಸೇರಿ ಹಲವರ ವಾದ. ಆದರೆ ಜಿಲ್ಲೆಯಾಗುವ ಮುಂಚಿನ ರಾಮನಗರದ ಭೂಮಿ ಬೆಲೆಗೂ ನಂತರದ ಬೆಲೆಗೂ ಅಜ - ಗಜಾಂತರ ವ್ಯತ್ಯಾಸವಿದೆ. ಆದರೆ, ಜೆಡಿಎಸ್‌ನವರ ವಾದವೇ ಬೇರೆ. ಜಿಲ್ಲೆಯ ಮುಂಚಿನ ರಾಮನಗರಕ್ಕೂ ನಂತರದ ರಾಮನಗರಕ್ಕೂ ನಿರೀಕ್ಷೆಗೆ ಮೀರಿದ ಬದಲಾವಣೆ ಆಗಿದೆ. ಬೆಂಗಳೂರು ಬೆಳವಣಿಗೆ ಆಗುತ್ತಿರುವಂತೆಯೇ ರಾಜಧಾನಿಗೆ ಹೊಂದಿಕೊಂಡಿರುವ ಜಿಲ್ಲೆಯ ಆಸ್ತಿ ಮೌಲ್ಯ ಹೆಚ್ಚಳ ಕಂಡಿದೆ. ಇದೇ ರೀತಿ ಜಿಲ್ಲಾಕೇಂದ್ರ ರಾಮನಗರ, ಪಕ್ಕದ ಚನ್ನಪಟ್ಟಣದಲ್ಲೂ ಭೂಮಿ ಮೌಲ್ಯ ಹೆಚ್ಚಿದೆ. ಮಾಗಡಿ, ಕನಕಪುರವೂ ಅಭಿವೃದ್ಧಿ ಕಂಡಿದೆ. ಇದರಿಂದ ಬೆಂಗಳೂರು ಹೊರತಾದ ಹೆಸರಿಗೆ ಬ್ಯ್ರಾಂಡ್ ವಾಲ್ಯೂ ಇಲ್ಲವೇ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿದೆ.
ಹೆಸರು ಬದಲಾವಣೆ ಇಲ್ಲವೇ ಮತ್ತೆ ಬೆಂಗಳೂರು ಸೇರ್ಪಡೆ ವಿಚಾರದ ಹಿಂದೆ ಎಚ್.ಡಿ.ಕುಮಾರಸ್ವಾಮಿ ಅವರನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹಿಂದೆ ರಾಜೀವ್ ಗಾಂಧಿ ಆರೋಗ್ಯ ವಿವಿ ಕನಕಪುರದಲ್ಲಿ ನಿರ್ಮಾಣ ವಿಚಾರದಲ್ಲೂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕೆಣಕುವ ಕೆಲಸವನ್ನು ಡಿ.ಕೆ.ಶಿವಕುಮಾರ್ ಮತ್ತು ಸುರೇಶ್ ಮಾಡಿದ್ದರು. ಈ ವೇಳೆ ಬಂದ್‌ಗಳು ನಡೆದಿದ್ದವು. ಈಗ ಮತ್ತೊಮ್ಮೆ ರಾಮನಗರ ಜಿಲ್ಲೆಯ ಹೆಸರು ಮತ್ತು ಬೆಂಗಳೂರಿನೊಂದಿಗೆ ಗುರುತಿಸಿಕೊಳ್ಳುವಿಕೆ ಸಂಬಂಧ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನಡುವಿನ ರಾಜಕೀಯ ಜಿದ್ದಾ ಜಿದ್ದಿಗೆ ವೇದಿಕೆ ಆಗುವುದಂತೂ ಖಂಡಿತ.