

* ಬೆಂ. ದಕ್ಷಿಣ ಜಿಲ್ಲೆಯಾದರೂ ಈಡೇರದ ಕನಸು
* 25 ಕಿಮೀ ನಿಯಮ ಸಡಿಲಿಕೆ ತಿದ್ದುಪಡಿಗೆ ಚಿಂತನೆ
ಗಂಗಾಧರ್ ಬೈರಾಪಟ್ಟಣ, ರಾಮನಗರ ರಾಜಧಾನಿ ಬೆಂಗಳೂರಿನ ಭಾಗವಾಗಿದ್ದ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಆಗಿದೆ. ಆದರೆ, ಜಿಲ್ಲೆಯ ಬಹು ದಿನಗಳ ಕನಸು ಮಾತ್ರ ಇನ್ನೂ ನನಸಾಗಿಲ್ಲ. ಹೌದು, ಜಿಲ್ಲಾ ಕೇಂದ್ರ ರಾಮನಗರಕ್ಕೆ ಬಿಎಂಟಿಸಿ ಬಸ್ ಸೇವೆ ಬೇಕು ಎಂಬ ಬೇಡಿಕೆ ಹಿಂದಿನಿಂದಲೂ ಇದೆ. ಆದರೆ, ಇದನ್ನು ಮಾತ್ರ ಸಾಕಾರಗೊಳಿಸುವ ನಿಟ್ಟಿನಲ್ಲಿ ಯಾವುದೇ ಸರ್ಕಾರ ಮುಂದೆ ಬಂದಿಲ್ಲ.
ರಾಜಧಾನಿಗೆ ಕೇವಲ 50 ಕಿಮೀ ದೂರದಲ್ಲಿರುವ ರಾಮನಗರದಿಂದ ಪ್ರತಿ ದಿನ ಸಾವಿರಾರು ಮಂದಿ ರಾಮನಗರದಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಕ್ಕೆ ಪ್ರಯಾಣ ಬೆಳೆಸುತ್ತಿದ್ದು, ಇದಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದರಿಂದಾಗಿ ಸಾರ್ವಜನಿಕರು ಪ್ರತಿದಿನ ಕಷ್ಟಪಟ್ಟೇ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಾರೆ.
ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬೆಂಗಳೂರಿಗೆ ಪ್ರಯಾಣಿಸುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ. ಈ ಮೊದಲು ಮೈಸೂರು, ಮಂಡ್ಯದಿಂದ ಬರುತ್ತಿದ್ದ ಬಸ್‌ಗಳ ಸಂಚಾರ ರಾಮನಗರದ ಪ್ರಯಾಣಿಕರಿಗೆ ಅನುಕೂಲಕರವಾಗಿದ್ದವು. ಆದರೆ, ಈ ಬಸ್‌ಗಳಲ್ಲೂ ಪ್ರಯಾಣಿಕರು ತುಂಬಿ ಬರುವುದರಿಂದ ರಾಮನಗರದಿಂದ ಕೆಂಗೇರಿ, ಬೆಂಗಳೂರಿಗೆ ಹೋಗುವ ವಿದ್ಯಾರ್ಥಿಗಳು, ಸರ್ಕಾರಿ ಮತ್ತು ಖಾಸಗಿ ಕಂಪನಿ ನೌಕರರು ಹಾಗೂ ಇತರ ಪ್ರಯಾಣಿಕರು ಅನಿವಾರ್ಯವಾಗಿ ನಿಂತುಮಕೊಂಡೇ ಪ್ರಯಾಣ ಮಾಡಬೇಕಾಗಿದೆ. ರಾಮನಗರದಿಂದ ಬೆಂಗಳೂರಿಗೆ ಪ್ರತಿ ದಿನ ಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ ಸೇವೆಯನ್ನು ಕೆಎಸ್‌ಆರ್‌ಟಿಸಿ ನೀಡುತ್ತಿದೆಯಾದರೂ ಇದು ಸಾಲುತ್ತಿಲ್ಲ.
ಜಿಲ್ಲೆಯ ಮಾಗಡಿ, ಹಾರೋಹಳ್ಳಿ ಮತ್ತು ರಾಮನಗರ ತಾಲೂಕಿನ ಬಿಡದಿ ಸೇರಿದಂತೆ ಕೆಲವು ಭಾಗಗಳಿಗೆ ಹಲವಾರು ವರ್ಷಗಳಿಂದ ಬರುತ್ತಿರುವ ಬಿಎಂಟಿಸಿ ರಾಮನಗರಕ್ಕೆ ಬರಲು ಇರುವ ನಿಯಮಗಳೇ ಅಡ್ಡಿಯಾಗಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆೆ ವ್ಯಾಪ್ತಿಗಡಿಯಿಂದ 25 ಕಿಮೀ ವರೆಗೆ ಮಾತ್ರ ಬಿಎಂಟಿಸಿ ಬಸ್ ಸೇವೆಯನ್ನು ಒದಗಿಸಲು ಅವಕಾಶ ಇದೆ. ಇದರಿಂದಾಗಿ ರಾಮನಗರಕ್ಕೆ ಬಿಎಂಟಿಸಿ ಇನ್ನೂ ಬಂದಿಲ್ಲ.
ಬಿಎಂಟಿಸಿ ವ್ಯವಸ್ಥೆ ಜಿಲ್ಲಾ ಕೇಂದ್ರ ರಾಮನಗರ ಪಾಲಿಗೆ ಅತಿ ಅಗತ್ಯವಾಗಿ ಬೇಕಿದೆ. ಬಿಡದಿ ಸೇರಿದಂತೆ ಇತರ ಭಾಗಗಳಿಗೆ ಖಾಸಗಿ ಕಂಪನಿಗಳಿಗೆ ಉದ್ಯೋಗಕ್ಕೆ ಹೋಗುವ ಮಹಿಳೆಯರೂ ಸೇರಿದಂತೆ ಉದ್ಯೋಗಿಗಳಿಗೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳ ಪ್ರಯಾಣಕ್ಕೆ ಬಿಎಂಟಿಸಿ ಬಸ್ ಖಂಡಿತವಾಗಿ ಉಪಯೋಗವಾಗಲಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಮತ್ತು ಸಂಬಂಧಪಟ್ಟ ಜನಪ್ರತಿನಿಧಿಗಳು ಗಂಭೀರವಾಗಿ ಚಿಂತಿಸಬೇಕಿದೆ.
ಲಭ್ಯ ಮಾಹಿತಿ ಪ್ರಕಾರ ಸಾರಿಗೆ ಇಲಾಖೆ ಬಿಎಂಟಿಸಿ ಬಸ್ ಸೇವೆಯನ್ನು ಬೆಂಗಳೂರು ಮಹಾನಗರ ಗಡಿಗೆ ಹೊಂದಿಕೊಂಡಿರುವ ಪ್ರಮುಖ ನಗರಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಇರುವ 25 ಕಿಮೀ ವ್ಯಾಪ್ತಿ ವಿಸ್ತರಣೆಗೆ ತಿದ್ದುಪಡಿ ಮಾಡಲು ಮುಂದಾಗಿದೆ. ಈಗಾಗಲೇ ಬಿಎಂಟಿಸಿ ಸೇವೆ ವಿಸ್ತರಣೆಗೆ ಹಲವಾರು ತಾಲೂಕು ಮತ್ತು ಜಿಲ್ಲಾ ಕೇಂದ್ರದಿಂದಲೂ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸರ್ಕಾರ ತಿದ್ದುಪಡಿಗೆ ಸಿದ್ಧಗೊಂಡಿದೆ.
ಜಿಲ್ಲಾ ಕೇಂದ್ರದಿಂದ ಬೆಂಗಳೂರು 50 ಕಿಮೀ ದೂರದಲ್ಲಿ ಇದೆ. ಬೆಂಗಳೂರಿಗೆ ಬರುವ ಬಸ್‌ಗಳ ಸಂಖ್ಯೆ ಸಾಲದು. ಅದರಲ್ಲೂ ಶಕ್ತಿ ಯೋಜನೆ ಜಾರಿಗೆ ಬಂದ ನಂತರವಂತೂ ಪ್ರಯಾಣ ಮತ್ತಷ್ಟು ಕಠಿಣವಾಗಿದೆ. ಸಾರಿಗೆ ಸಚಿವರು ಕೂಡಲೇ ಬಿಎಂಟಿಸಿ ಬಸ್ ಸೇವೆ ಒದಗಿಸಿದರೆ ಖಂಡಿತವಾಗಿ ಪ್ರಯಾಣಿಕರಿಗೆ ಕೊಂಚ ಅನುಕೂಲ ಆಗಲಿದೆ. ಈ ನಿಟ್ಟಿನಲ್ಲಿ ಸಾರಿಗೆ ಸಚಿವರು ಗಮನ ಹರಿಸಬೇಕು. ಸುಧಾಪ್ರಯಾಣಿಕರು, ರಾಮನಗರ, ನಿವಾಸಿ
--
ಬೆಂಗಳೂರು ಮಹಾನಗರ ಗಡಿಯಿಂದ 25 ಕಿಮೀ ವ್ಯಾಪ್ತಿಗೆ ಮಾತ್ರ ಬಿಎಂಟಿಸಿ ಸೇವೆ ಒದಗಿಸಬಹುದು ಎಂಬ ನಿಯಮವಿದೆ. ಇದಕ್ಕೆ ತಿದ್ದುಪಡಿ ತರಲು ಚಿಂತನೆ ನಡೆಸಲಾಗಿದೆ. ರಾಮನಗರ ಸೇರಿ ಹಲವಾರು ಊರುಗಳಿಗೆ ಬಿಎಂಟಿಸಿ ಸೇವೆ ನೀಡಬೇಕು ಎಂಬ ಬೇಡಿಕೆ ಇದ್ದು, ಇದನ್ನೂ ಸಹ ಗಂಭೀರವಾಗಿ ಪರಿಗಣಿಸಲಾಗಿದೆ. ರಾಮಲಿಂಗಾರೆಡ್ಡಿ ಸಾರಿಗೆ ಸಚಿವರು