ಇಂದು ರಾಮನಗರ ನಗರಸಭೆ ಚುನಾವಣೆ

FotoJet
Published on

 ಕೆ.ಶೇಷಾದ್ರಿ ಅಧ್ಯಕ್ಷರಾಗುವುದು ಬಹುತೇಕ ಖಚಿತ | ಶಾಸಕ ಇಕ್ಬಾಲ್ ಹುಸೇನ್ ಬಣಕ್ಕೆ ಹಿನ್ನಡೆ?

 ರಾಮನಗರ : ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಚುನಾವಣೆ ಇಂದು (ಡಿ.23) ನಡೆಯಲಿದ್ದು, ನಗರಸಭೆ ಸದಸ್ಯ ಕೆ.ಶೇಷಾದ್ರಿ (ಶಶಿ) ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮೇ 8 ರಂದು ಹಿಂದಿನ ಅಧ್ಯಕ್ಷರು ರಾಜೀನಾಮೆ ನೀಡಿದ್ದರು. ಆದರೆ, ವಿವಿಧ ಕಾರಣಗಳಿಂದ ಚುನಾವಣೆ ದಿನಾಂಕ ನಿಗದಿ ಆಗಿರಲಿಲ್ಲ. ಅಂತಿಮವಾಗಿ ಕಳೆದ ವಾರ ಚುನಾವಣಾಕಾರಿ ಚುನಾವಣಾ ದಿನಾಂಕ ನಿಗದಿ ಮಾಡಿದ್ದರು. ಇದರೊಂದಿಗೆ ರಾಜಕೀಯ ಚಟುವಟಿಕೆ ಬಿರುಸು ಪಡೆದುಕೊಂಡಿದ್ದವು.

ಸಭೆಯಲ್ಲಿ ನಿರ್ಧಾರ

ರಾಮನಗರ ನಗರಸಭೆ ಎರಡನೇ ಅವಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಸದಸ್ಯರಾದ ದೌಲತ್ ಪಾಷಾ, ನಿಜಾಂ ಷರೀಪ್ ನಡುವೆ ಪೈಪೋಟಿ ಇತ್ತು. ಇಬ್ಬರೂ ತಮ್ಮದೆ ಪ್ರಭಾವ ಬಳಸಿ ಅಧ್ಯಕ್ಷ ಸ್ಥಾನ ಪಡೆಯುವ ತವಕದಲ್ಲಿದ್ದರು. ಅಧ್ಯಕ್ಷ ಸ್ಥಾನಕ್ಕೆ ಸಂಬಂಸಿದಂತೆ ಶಾಸಕ ಇಕ್ಬಾಲ್ ಹುಸೇನ್ ತಮ್ಮದೇ ಆಯ್ಕೆಯನ್ನು ಮುಂದಿಟ್ಟುಕೊಂಡು, ಅವರನ್ನೇ ಅಕಾರಕ್ಕೇರಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಗರಸಭೆ ಸದಸ್ಯರಲ್ಲಿನ ಒಂದು ಬಣ ಕೆ.ಶೇಷಾದ್ರಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಒತ್ತಡ ಹಾಕಿತ್ತು. ಅಂತಿಮವಾಗಿ ಈ ವಿಷಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ.ಸುರೇಶ್ ಅಂಗಳಕ್ಕೆ ಪ್ರವೇಶ ಪಡೆಯಿತು.

ಈ ಹಿನ್ನೆಲೆಯಲ್ಲಿ ಭಾನುವಾರ ಸಭೆ ನಡೆಸಿರುವ ಡಿ.ಕೆ.ಸುರೇಶ್, ಕೆ.ಶೇಷಾದ್ರಿ ಅವರ ಆಯ್ಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಇದ್ದ ಸದಸ್ಯರಲ್ಲಿ ಇಬ್ಬರನ್ನು ಹೊರತುಪಡಿಸಿ ಎಲ್ಲರೂ ಕೆ.ಶೇಷಾದ್ರಿ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎಂದು ಮನವಿ ಮಾಡಿರುವ ಮಾಹಿತಿ ತಿಳಿದುಬಂದಿದೆ.

ಅಕಾರ ಹಂಚಿಕೆ ಸೂತ್ರ

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಉಪಾಧ್ಯಕ್ಷ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅಕಾರ ಹಂಚಿಕೆ ಸೂತ್ರ ನಿಗದಿ ಮಾಡಲಾಗಿದೆ ಎನ್ನಲಾಗಿದೆ. ಉಳಿದ 26 ತಿಂಗಳ ಅವಯನ್ನು ತಲಾ 13 ತಿಂಗಳಂತೆ ವಿಭಾಗಿಸಿ ಕೆ.ಶೇಷಾದ್ರಿ ಬಣ ಮತ್ತು ಶಾಸಕ ಇಕ್ಬಾಲ್ ಹುಸೇನ್ ಬಣದ ಇಬ್ಬರಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮೂಲಗಳು ಖಚಿತ ಪಡಿಸಿವೆ.

ಜೆಡಿಎಸ್‌ನಿಂದ ಕಾದು ನೋಡುವ ತಂತ್ರ

ಕಾಂಗ್ರೆಸ್‌ನಲ್ಲಿ ಮೊದಲು ಉಂಟಾಗಿದ್ದ ಗೊಂದಲದ ಲಾಭ ಪಡೆದುಕೊಳ್ಳುವ ಯತ್ನದಲ್ಲಿ ಜೆಡಿಎಸ್ ಇತ್ತು. 31 ಸದಸ್ಯ ಬಲದ ನಗರಸಭೆಯಲ್ಲಿ ಜೆಡಿಎಸ್ 11 ಮತ್ತು ಕಾಂಗ್ರೆಸ್ 20 ಸದಸ್ಯರನ್ನು ಹೊಂದಿದೆ. ಒಂದು ವೇಳೆ ಕಾಂಗ್ರೆಸ್‌ನಲ್ಲಿ ಒಳಜಗಳ ತಾರಕಕ್ಕೇರಿ, ಜೆಡಿಎಸ್ ಯಾವುದೇ ಒಂದು ಗುಂಪಿನ ಪರವಾಗಿ ನಿಂತಿದ್ದರೆ ಇಡೀ ಚಿತ್ರಣವೇ ಬದಲಾಗುತಿತ್ತು. ಆದರೆ ಈಗ ಪರಿಸ್ಥಿತಿ ಬಹುತೇಕ ಬದಲಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಕಾದು ನೋಡುವ ತಂತ್ರ ಅನುಸರಿಸಲಿದೆ. ಕಾಂಗ್ರೆಸ್‌ನಲ್ಲಿ ಎಲ್ಲವೂ ಅಂದುಕೊಂಡಂತೆ ಆದರೆ ಜೆಡಿಎಸ್ ನಾಮಪತ್ರ ಸಲ್ಲಿಸುವುದು ಅನುಮಾನ ಎನ್ನಲಾಗಿದೆ. ಒಂದು ವೇಳೆ ನಾಮಪತ್ರ ಸಲ್ಲಿಸದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆ ಆಗುವುದು ಖಚಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net