

*ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದಶಕದ ಕನಸು ನನಸು
ಗಂಗಾಧರ್ ಬೈರಾಪಟ್ಟಣ ರಾಮನಗರ
ಬಹುಕಾಲದ ಕನಸನ್ನು ನನಸು ಮಾಡಿಕೊಳ್ಳುವಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದು, 17 ವಸಂತಗಳನ್ನು ಪೂರೈಸಿ 18ನೇ ವರ್ಷಕ್ಕೆ ಕಾಲಿಡುವ ಹೊತ್ತಿನಲ್ಲಿ ರಾಮನಗರ ಜಿಲ್ಲೆಯ ಹೆಸರು ಬದಲಾಗಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಾಗಿದೆ.
2007ರ ಆ.23ರಂದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಒತ್ತಾಸೆಯ ಫಲವಾಗಿ ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಗಿ ಉದಯಿಸಿತು. ಇನ್ನು ಕೆಲವೇ ದಿನಗಳಲ್ಲಿ 18ನೇ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಳ್ಳುವ ಸಂಭ್ರಮದಲ್ಲಿದ್ದ ರಾಮನಗರದ ಹೆಸರನ್ನು ಪಟ್ಟು ಬಿಡದೆ ಬದಲಾಯಿಸಿ, ರಾಜಕೀಯ ವಿರೋಧಿಗಳಿಗೆ ಟಾಂಗ್ ನೀಡುವ ಮೂಲಕ ಡಿ.ಕೆ.ಶಿವಕುಮಾರ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಹಲವು ವರ್ಷಗಳಿಂದಲೂ ರಾಮನಗರ ಜಿಲ್ಲೆಗೆ ಮರು ನಾಮಕರಣ ಮಾಡಬೇಕು ಎನ್ನುವ ಚರ್ಚೆಗಳ ನಡುವೆಯೇ, ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ವಿವಾದದ ಅಲೆಯನ್ನು ಎಬ್ಬಿಸಿತ್ತು. 2007ರಲ್ಲಿ ಬೆಂಗಳೂರು ಗ್ರಾಮಾಂತರವನ್ನು ಸೀಳಿಕೊಂಡು ರಾಮನಗರ ಉದಯವಾದಾಗಿನಿಂದಲೂ ಹೆಸರಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಲೇ ಇದ್ದವು. ಬೆಂಗಳೂರು ಒಳಗೊಂಡ ವಿವಿಧ ಹೆಸರುಗಳನ್ನು ಇಡುವ ಬಗ್ಗೆ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಲೇ ಇದ್ದರೂ, ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವ ಮೂಲಕ ಡಿ.ಕೆ.ಶಿವಕುಮಾರ್ ಕನಸು ಈಡೇರಿಸಿಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾವಣೆ ಆದರೂ, ರಾಮನಗರವೇ ಜಿಲ್ಲಾ ಕೇಂದ್ರವಾಗಲಿದೆ. ಇದರೊಂದಿಗೆ ಕೊಡಗಿಗೆ ಮಡಿಕೇರಿ, ದಕ್ಷಿಣ ಕನ್ನಡಕ್ಕೆ ಮಂಗಳೂರು, ಉತ್ತರ ಕನ್ನಡಕ್ಕೆ ಕಾರವಾರ, ಬೆಂಗಳೂರು ಗ್ರಾಮಾಂತರಕ್ಕೆ ಬೆಂಗಳೂರು ನಗರ, ವಿಜಯನಗರಕ್ಕೆ ಹೊಸಪೇಟೆಯೇ ಜಿಲ್ಲಾ ಕೇಂದ್ರವಾದಂತೆ, ರಾಮನಗರ ಬೆಂಗಳೂರು ದಕ್ಷಿಣಕ್ಕೆ ಜಿಲ್ಲಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
2014ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಕಾಲದಿಂದಲೂ ಹೆಸರು ಬದಲಾವಣೆ ಬಗ್ಗೆ ಡಿ.ಕೆ. ಶಿವಕುಮಾರ್ ಮಾತನಾಡುತ್ತಿದ್ದರು. ಆದರೆ, ಈ ಬಾರಿ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿದ ನಂತರ, ಇದಕ್ಕೆ ವೇಗ ನೀಡಿದ ಅವರು, ಹಲವು ಕಡೆಗಳಲ್ಲಿ ಇದನ್ನು ಪ್ರಸ್ತಾಪ ಮಾಡುವ ಮೂಲಕ ವಿವಾದ ಚಾಲ್ತಿಯಲ್ಲಿ ಇರುವಂತೆ ನೋಡಿಕೊಂಡರು. ಹೆಸರು ಬದಲಾವಣೆಗೆ ಎಚ್.ಡಿ.ಕುಮಾರಸ್ವಾಮಿ, ಹಾಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಸೇರಿ ಬಿಜೆಪಿ, ಜೆಡಿಎಸ್‌ನ ಹಲವರು ವಿರೋಧ ವ್ಯಕ್ತಪಡಿಸಿದರೂ ಇದಕ್ಕೆ ಕ್ಯಾರೇ ಎನ್ನದ ಅವರು, ರಾಮನಗರದ ಕಾಂಗ್ರೆಸ್ ಮುಖಂಡರ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಹೆಸರು ಬದಲಾವಣೆಗೆ ಹಕ್ಕೊತ್ತಾಯ ಮಂಡಿಸಿ ಬಂದಿದ್ದರು. ಇದೀಗ ಇದಕ್ಕೆ ಅಂತಿಮ ರೂಪ ಕೊಟ್ಟಿದ್ದಾರೆ.
ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಸಂಪುಟದ ತೀರ್ಮಾನ ಗೊಂದಲಕ್ಕೆ ಕಾರಣವಾಗಿದೆ. ಈಗಾಗಲೇ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಬೆಂಗಳೂರು ದಕ್ಷಿಣ ತಾಲೂಕು ಇದೆ. ಅಲ್ಲದೆ, ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರವೂ ಇದೆ. ಈಗ ಮತ್ತೊಂದು ದಕ್ಷಿಣ ಹುಟ್ಟಿಕೊಂಡಿರುವುದು ಸಾರ್ವಜನಿಕವಾಗಿ ಹಲವು ಗೊಂದಲಗಳಿಗೆ ಕಾರಣವಾಗಲಿದೆ.
===