

* ಮೊದಲ ಹಂತದಲ್ಲಿ 500 ಮಂದಿಗೆ ತರಬೇತಿ
* ಸಂಕಷ್ಟದಲ್ಲಿರುವವರ ರಕ್ಷಣೆಗೆ ಯೋಜನೆ
* ಯುವಕರು, ಗೃಹರಕ್ಷಕ ಸಿಬ್ಬಂದಿಗೆ ತರಬೇತಿ
ಗಂಗಾಧರ್ ಬೈರಾಪಟ್ಟಣ ರಾಮನಗರ
ಈ ಬಾರಿ ಮುಂಗಾರು ಬಿರುಸಾಗಲಿದೆ ಎನ್ನುವ ಹವಾಮಾನ ಇಲಾಖೆ ಮುನ್ಸೂಚನೆಯ ನಡುವೆಯೇ ಜಿಲ್ಲೆಯ ಅಗ್ನಿ ಶಾಮಕ ಇಲಾಖೆ ವಿಪತ್ತು ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.
ಕಳೆದ ಎರಡು ವರ್ಷಗಳ ಹಿಂದೆ ಕಂಡರಿಯದ ರೀತಿಯಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಅಗ್ನಿಶಾಮಕ ಇಲಾಖೆಗೆ ಪಾಠ ಕಲಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಇಲಾಖೆ ಸ್ಥಳೀಯ ಯುವಕರು ಮತ್ತು ಗೃಹರಕ್ಷಕ ಸಿಬ್ಬಂದಿಗೆ ತರಬೇತಿ ನೀಡುವ ಮೂಲಕ ತುರ್ತು ಸನ್ನಿವೇಶದಲ್ಲಿ ಇವರನ್ನು ಬಳಸಿಕೊಂಡು ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣೆಗೆ ಯೋಜನೆ ರೂಪಿಸಿ ಮೇ 27ರಂದು ಜಿಪಂ ಸಭಾಂಗಣದಲ್ಲಿ ಮೊದಲ ಹಂತದಲ್ಲಿ ತರಬೇತಿ ನೀಡಿದೆ.
ಈಗಾಗಲೇ ವಾಹನ, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ ತುರ್ತು ಸಂದರ್ಭದಲ್ಲಿ ಎಲ್ಲ ಕಡೆಗಳಿಗೂ ಏಕ ಕಾಲದಲ್ಲಿ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಇಲಾಖೆ ಬಗೆಗಿನ ವಿಶ್ವಾಸಾರ್ಹತೆ ಕಡಿಮೆ ಆಗುವ ಜತೆಗೆ ಸಾರ್ವಜನಿಕರು ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಯುವ ಸಮುದಾಯದ ಬಳಕೆಗೆ ಯೋಜನೆ ರೂಪಿಸಲಾಗಿದೆ.
ತರಬೇತಿ ಪಡೆಯಲು ಇಷ್ಟ ಇರುವ ಪ್ರತಿ ಗ್ರಾಮದ ಕನಿಷ್ಠ 5 -10 ಯುವಕರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತುರ್ತು ಸಂದರ್ಭದಲ್ಲಿ ಹೇಗೆ ತೊಂದರೆಯಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಬೇಕು ಎನ್ನುವ ಬಗ್ಗೆ ತರಬೇತಿ ನೀಡಲಾಗುತ್ತದೆ. ತರಬೇತಿ ಹೊಂದಿದ ಯುವಕರ ಡಾಟಾಬೇಸ್ ಸೃಜಿಸಿ, ಅಗ್ನಿಶಾಮಕ ಕಚೇರಿಗೆ ಬರುವ ಕರೆಗಳ ಮಾಹಿತಿ ನೀಡಿ ತಕ್ಷಣವೇ ಅಪಾಯದಲ್ಲಿ ಸಿಲುಕಿರುವವರಿಗೆ ರಕ್ಷಣೆಗೆ ಕಳುಹಿಸಲಾಗುತ್ತದೆ. ಇದರಿಂದ ಕನಿಷ್ಠ ಪ್ರಮಾಣದಲ್ಲಿಯಾದರೂ ನೊಂದವರ ನೆರವಿಗೆ ಬರಬಹುದು ಎನ್ನುವುದು ಇಲಾಖೆ ಲೆಕ್ಕಾಚಾರ.
ಈಗಾಗಲೇ ಪೊಲೀಸ್ ಇಲಾಖೆ ಸಿಬ್ಬಂದಿ ಕೊರತೆ ನೀಗಿಸುತ್ತಿರುವ ಗೃಹರಕ್ಷಕ ಸಿಬ್ಬಂದಿಯನ್ನು ಈ ಬಾರಿಯ ಮಳೆಗಾಲದ ಕೆಲಸಕ್ಕೆ ಬಳಕೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಸುಮಾರು 700 ಗೃಹರಕ್ಷಕ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಮಂದಿ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಉಳಿದವರು ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆ ವ್ಯಾಪ್ತಿಯಡಿ ಕೆಲಸ ಮಾಡುತ್ತಿದ್ದಾರೆ. ಇವರಿಗೂ ಪ್ರವಾಹ ಸೇರಿ ಇತರ ಸನ್ನಿವೇಶದಲ್ಲಿ ಹೇಗೆ ಜನರ ನೆರವಿಗೆ ಧಾವಿಸಬೇಕು ಎನ್ನುವ ತರಬೇತಿ ನೀಡುವ ಮೂಲಕ ಅಗ್ನಿ ಶಾಮಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯನ್ನು ಅಲ್ಪ ಮಟ್ಟದಲ್ಲಿ ತುಂಬಿಕೊಳ್ಳುವ ಕೆಲಸ ಇಲಾಖೆ ಮಾಡುತ್ತಿದೆ.
2022ರಲ್ಲಿ ಉಂಟಾದ ಪ್ರವಾಹದ ಸನ್ನಿವೇಶದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬಹುತೇಕ ಸಂಕಷ್ಟಕ್ಕೆ ಸಿಲುಕಿದ್ದರು. ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆಗೆ ಹೊರ ಜಿಲ್ಲೆಯ ಸಿಬ್ಬಂದಿ ಮತ್ತು ಪರಿಕರಗಳನ್ನು ಅವಲಂಬಿಸಿದ್ದರು. ಆದರೆ, ಈ ಬಾರಿ ಬೋಟ್ ಹೊರತುಪಡಿಸಿ ಅಗತ್ಯ ಪರಿಕರಗಳನ್ನು ಇಲಾಖೆ ಖರೀದಿಸಿದೆ. ಆದರೆ, ಒಂದೇ ಒಂದು ಬೋಟ್ ಇದ್ದು, 2022ರ ಪರಿಸ್ಥಿತಿ ಮರುಕಳಿಸಿದರೆ, ಬೋಟ್‌ಗಾಗಿ ಬೆಂಗಳೂರು ಇಲ್ಲವೇ ಇತರ ಜಿಲ್ಲೆಯನ್ನು ಅವಲಂಬಿಸಬೇಕಿದೆ. ಆದರೆ ತುರ್ತು ಬಳಕೆಗೆ ತೆಪ್ಪ ಬಳಕೆಗೆ ಇಲಾಖೆ ಸಿದ್ಧವಾಗಿದೆ.
ಮಳೆಗಾಲದಲ್ಲಿ ಎದುರಾಗಬಹುದಾದ ಆಪತ್ತು ಎದುರಿಸಲು ಅಗ್ನಿಶಾಮಕ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಈ ಬಾರಿ ನೊಂದವರ ಕರೆಗೆ ತುರ್ತಾಗಿ ಸ್ಪಂದಿಸಲು ಯುವಕರು ಮತ್ತು ಗೃಹ ರಕ್ಷಕ ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ತರಬೇತಿ ನೀಡಲಾಗುತ್ತಿದೆ. ಮಂಜುನಾಥ್, ಜಿಲ್ಲಾ ಅಧಿಕಾರಿ, ಅಗ್ನಿ ಶಾಮಕ ಇಲಾಖೆ