ರಾಮನಗರ ಜಿಲ್ಲಾ ಬಿಜೆಪಿ ಬಲವರ್ಧನೆಯಾಗಲಿದೆಯೇ ?

vijayendra story
Published on
  • ವಿಜಯೇಂದ್ರ ಸಾರಥ್ಯ ಕೊಡುವುದೇ ಶಕ್ತಿ - ಒಗ್ಗೂಡುವವೇ ಬಣ

ಗಂಗಾಧರ್ ಬೈರಾಪಟ್ಟಣ ರಾಮನಗರ

ಪಕ್ಷದಲ್ಲಿ ಬಲವೂ ಇಲ್ಲ, ಇರುವ ನಾಯಕರ ನಡುವೆ ಒಗ್ಗಟ್ಟೂ ಇಲ್ಲ ಎನ್ನುವ ಸ್ಥಿತಿಯಲ್ಲಿರುವ ಬಿಜೆಪಿ ಜಿಲ್ಲಾ ಘಟಕಕ್ಕೆ ಪಕ್ಷದ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಲ ತುಂಬುವರೇ?ಜಿಲ್ಲೆಯ ಬಿಜೆಪಿ ವಲಯದಲ್ಲಿಯೇ ಇಂತಹದೊಂದು ಪ್ರಶ್ನೆ ಮೂಡಿದ್ದು, ಪ್ರಭಾವಿಗಳೇ ಇರುವ ರಾಮನಗರ ಜಿಲ್ಲೆಯಲ್ಲಿ ಪಕ್ಷವನ್ನು ಬಲವಾಗಿ ಕಟ್ಟುವ ಜವಾಬ್ದಾರಿ ನೂತನ ರಾಜ್ಯಾಧ್ಯಕ್ಷರ ಮೇಲಿದೆ.

ಒಡೆದ ಮನೆ: ಜಿಲ್ಲೆಯಲ್ಲಿ ಬಿಜೆಪಿ ಹಿಂದಿನಿಂದಲೂ ಒಡೆದ ಮನೆಯಾಗಿಯೇ ಇದೆ. ಪ್ರತಿ ತಾಲೂಕಿಗೆ ಒಂದು ಗುಂಪು, ಜಿಲ್ಲಾ ಮುಖಂಡರ ನಡುವೆ ಜಿದ್ದಾ ಜಿದ್ದಿ ಪಕ್ಷ ಸಂಘಟನೆ ವಿಚಾರದಲ್ಲಿ ಹಿನ್ನಡೆ ಅನುಭವಿಸುವಂತೆ ಮಾಡಿದೆ. ಚನ್ನಪಟ್ಟಣ ಹೊರತುಪಡಿಸಿ ಉಳಿದ ಮೂರು ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಾರ್ಯಕರ್ತರು ಮತ್ತು ಎರಡನೇ ಸಾಲಿನ ಮುಖಂಡರನ್ನು ಹಿಡಿದಿಟ್ಟುಕೊಳ್ಳುವ ನಾಯಕ ಬರಲೇ ಇಲ್ಲ. ಇದರ ಪರಿಣಾಮ ಪ್ರತಿ ಚುನಾವಣೆಗಳಲ್ಲೂ ಪಕ್ಷ ನೆಲಕಚ್ಚುವಂತಾಗಿದೆ.


ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆರ್. ಅಶೋಕ್ ಸ್ಪರ್ಧೆಯ ಹೊರತಾಗಿಯೂ ನಡೆದ ಬಣ ರಾಜಕೀಯ ಕನಕಪುರದಲ್ಲಿ ಪಕ್ಷ ಠೇವಣಿ ಕಳೆದುಕೊಳ್ಳುವಂತಾಯಿತು. ರಾಮನಗರದ ಅಭ್ಯರ್ಥಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಲ್ಲಿ ವಿಫಲರಾದ ಕಾರಣ ಇಲ್ಲಿಯೂ ಮೂರನೇ ಸ್ಥಾನಕ್ಕೆ ತೃಪ್ತಿಪಡುವಂತೆ ಆಯಿತು.
ಇಂತಹ ಎಲ್ಲ ಬಣಗಳನ್ನು ಒಗ್ಗೂಡಿಸಿಕೊಂಡು ಚುನಾವಣೆಗೆ ಪಕ್ಷವನ್ನು ಮುನ್ನೆಡಸಬೇಕಾದ ಜವಾಬ್ದಾರಿ ವಿಜಯೇಂದ್ರ ಅವರ ಹೆಗಲಿಗೆ ಏರಿದೆ.

ಮುನ್ನೆಲೆಗೆ ಬರುವರೇ ರುದ್ರೇಶ್?

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹಾಗೂ ನೂತನ ರಾಜಾಧ್ಯಕ್ಷರಿಗೆ ಆತ್ಮೀಯರೂ ಆಗಿರುವ ಕೆಆರ್‌ಐಡಿಎಲ್‌ನ ಮಾಜಿ ಅಧ್ಯಕ್ಷ ಎಂ.ರುದ್ರೇಶ್ ಈಗ ಮತ್ತೆ ಜಿಲ್ಲೆಯ ರಾಜಕಾರಣದಲ್ಲಿ ಮುನ್ನೆಲೆಗೆ ಬರಬೇಕು ಎನ್ನುವ ಅವರ ಅಭಿಮಾನಗಳ ಆಗ್ರಹವೂ ಇದೆ.

ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಸಮರ್ಥವಾಗಿ ಕಟ್ಟಿದ್ದ ಎಂ.ರುದ್ರೇಶ್, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ ಸ್ಪರ್ಧೆ ಮಾಡುವ ಸಲುವಾಗಿ ರಾಮನಗರ ರಾಜಕಾರಣದಿಂದ ದೂರವೇ ಉಳಿದರು. ಅಲ್ಲದೆ, ರುದ್ರೇಶ್ ಮತ್ತು ತಂಡವನ್ನು ನಿರ್ಲಕ್ಷೃ ಮಾಡುತ್ತಿದೆ ಎನ್ನುವ ಕಾರಣಕ್ಕೆ ಕೆಲವರು ಪಕ್ಷದ ಚಟುವಟಿಕೆಯಿಂದ ದೂರವೇ ಉಳಿದರು. ಇದರ ಪರಿಣಾಮ ಜಿಲ್ಲೆಯ ಪಕ್ಷಕ್ಕೆ ಹಿನ್ನಡೆಯಾಗಿದ್ದಂತೂ ಸತ್ಯ.


ಮುಂದಿದೆ ಎಂಪಿ ಚುನಾವಣೆ

ಈ ಬಾರಿ ಲೋಕಸಭೆ ಚುನಾವಣೆ ಕಾಂಗ್ರೆಸ್ - ಬಿಜೆಪಿಗೆ ಸತ್ವ ಪರೀಕ್ಷೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಿಂದ ಆಯ್ಕೆಯಾದ ಏಕೈಕ ಸಂಸದ ಡಿ.ಕೆ.ಸುರೇಶ್ ಅವರಿಗೆ ಈ ಬಾರಿ ಕ್ಷೇತ್ರ ವ್ಯಾಪ್ತಿಯಲ್ಲಿ ತೀವ್ರ ಪೈಪೋಟಿ ಏರ್ಪಡುವುದು ನಿಶ್ಚಿತ. ಆದರೆ, ಬಿಜೆಪಿ ಸಂಘಟಿತವಾಗಿ ಹೋರಾಟ ಮಾಡಿದರಷ್ಟೇ ಡಿ.ಕೆ.ಸುರೇಶ್ ವಿರುದ್ಧ ಹೋರಾಟ ಮಾಡಬಹುದಾಗಿದೆ.

ಬೆಂಗಳೂರು ನಗರದ ದಕ್ಷಿಣ ವಿಧಾನಸಭೆ ಕ್ಷೇತ್ರ, ರಾಜರಾಜೇಶ್ವರಿ ನಗರ, ಆನೇಕಲ್, ತುಮಕೂರು ಜಿಲ್ಲೆಯ ಕುಣಿಗಲ್, ಹಾಗೂ ರಾಮನಗರ ಜಿಲ್ಲೆಯ ನಾಲ್ಕೂ ವಿಧಾನಸಭೆ ಕ್ಷೇತ್ರಗಳು ಬೆಂಗಳೂರು ಗ್ರಾಮಾಂತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡಲಿವೆ. ಇಲ್ಲಿ ಕಾಂಗ್ರೆಸ್‌ಗೆ ಪ್ರಬಲ ಹೋರಾಟ ನೀಡುವ ಶಕ್ತಿ ಬಿಜೆಪಿಗೆ ಇದೆಯಾದರೂ ಸಂಘಟನೆ ಕೊರತೆ ಬಾರಿ ಪಕ್ಷ ಸೋಲು ಕಂಡಿತು.

ಈ ಬಾರಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಬಹುತೇಕ ಬಿಜೆಪಿ ಅಭ್ಯರ್ಥಿ ಆಗಲಿದ್ದು, ಸುರೇಶ್ ವಿರುದ್ಧ ಹೋರಾಟದ ನಿರೀಕ್ಷೆ ಮಾಡಬಹುದಾಗಿದೆ. ಆದರೆ, ಯೋಗೇಶ್ವರ್ ಮತ್ತು ವಿಜಯೇಂದ್ರ ಅವರ ಸಂಬಂಧ ಅಷ್ಟಕಷ್ಟೇ ಎನ್ನುವಂತೆ ಇದೆ. ಇದನ್ನು ಮೀರಿ ಪಕ್ಷ ಸಂಘಟನೆಗೆ ಇಳಿದಾಗ ವಿಯಜೇಂದ್ರ ಅವರ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದಲೂ ಸಕಾರಾತ್ಮ ಫಲಿತಾಂಶ ದೊರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net