

ಕಾರವಾರ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಹೋರಾಡಿದ ಸಾಕಷ್ಟು ಜನ ಜಿಲ್ಲೆಯಲ್ಲಿದ್ದಾರೆ. ಈಗ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯದಲ್ಲೂ ಜಿಲ್ಲೆಯ ಕೊಡುಗೆ ಇದೆ ಎಂಬುದೇ ಹೆಮ್ಮೆಯ ವಿಷಯ.
ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸುವ ಸಲುವಾಗಿ ಅಮೃತಶಿಲೆಯಲ್ಲಿ ಜೈಪುರದ ಸತ್ಯನಾರಾಯಣ ಪಾಂಡೆ,ಹೆಗ್ಗಡದೇವನಕೋಟೆಯ ಶಿಲೆಯಲ್ಲಿ ರಾಜ್ಯದ ಮೈಸೂರಿನ ಅರುಣರಾಜ್ ಮತ್ತು ಹೊನ್ನಾವರ ಇಡಗುಂಜಿಯ ಗಣೇಶ ಭಟ್ಟ ಅವರ ರಾಮಲಲ್ಲಾ ಮೂರ್ತಿ ಕೆತ್ತಿದ್ದಾರೆ. ಮೂರರಲ್ಲಿ ಒಂದು ಮೂರ್ತಿಯನ್ನು ಆಯ್ಕೆ ಮಾಡಿ, ರಾಮ ಮಂದಿರ ಗರ್ಭಗುಡಿಯೊಳಗೆ ಪ್ರತಿಷ್ಠಾಪಿಸಲಾಗುತ್ತದೆ. ಇನ್ನೆರಡು ಮೂರ್ತಿಗಳಿಗೂ ಅದೇ ಪರಿಸರದಲ್ಲಿ ಸೂಕ್ತ ಸ್ಥಾನವನ್ನು ನೀಡಲಾಗುವುದು ಎಂದು ರಾಮ ಮಂದಿರ ನಿರ್ಮಾಣ ಸಮಿತಿ ತಿಳಿಸಿದೆ. ಯಾರು ಕೆತ್ತಿದ ಮೂರ್ತಿಗೆ ಗರ್ಭ ಗುಡಿಯಲ್ಲಿ ಸ್ಥಾನ ಸಿಗಲಿದೆ ಎಂಬುದು ಇನ್ನಷ್ಟೇ ಅಧಿಕೃತವಾಗಿ ಘೋಷಣೆಯಾಗಬೇಕಿದೆ.
ಇಡಗುಂಜಿ ಮೂಲದ ಶಿಲ್ಪಿ ಗಣೇಶ ಭಟ್ ಅವರು ಮೇ 23 ರಂದು ಪುನರ್ವಸು ನಕ್ಷತ್ರದಲ್ಲಿ ಕಂಕಣ ಕಟ್ಟಿ ಅಯೋಧ್ಯೆಯಲ್ಲೇ ಶಿಲೆಯ ಪೂಜೆಯೊಂದಿಗೆ ಕೆತ್ತನೆ ಪ್ರಾರಂಭಿಸಿದ್ದರು. "ಅದು ಕೇವಲ ಕಲ್ಲಿನ ಕೆತ್ತನೆಯಾಗಿರಲಿಲ್ಲ.ಅದೊಂದು ವೃತದಂತೆ ಇತ್ತು ಎಂದು ಗಣೇಶ ಭಟ್ಟ ಮಾಧ್ಯಮಗಳ ಜತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೆತ್ತನೆ ಪ್ರಾರಂಭವಾದ ದಿನದಿಂದ ನಿತ್ಯ ನಂದಾ ದೀಪ ಉರಿಯುತ್ತಿತ್ತು. ಮಂತ್ರ ಪಠಣ ನಡೆಯುತ್ತಿತ್ತು. ಒಟ್ಟಿನಲ್ಲಿ ಇದುವರೆಗೆ ನಿರ್ಮಿಸಿರದ ಅಪರೂಪದ ಬಾಲ ರಾಮನ ಮೂರ್ತಿಯನ್ನು ರಚಿಸಿದ್ದು, ಆ ಕಾರ್ಯ ಆತ್ಮ ಸಂತೋಷ ನೀಡಿದೆ' ಎಂದಿದ್ದಾರೆ.
ಇದನ್ನೂ ಓದಿ: ರಾಮ ಭಕ್ತರ ಬಂಧನ ಖಂಡಿಸಿ ಪ್ರತಿಭಟನೆ
ಸುಮಾರು 2 ಸಾವಿರ ವರ್ಷ ಹಿಂದಿನ ಬಾಲ ರಾಮನನ್ನು ಕಲ್ಪಿಸಿಕೊಂಡು, ಭಾರತೀಯ ಶಿಲ್ಪ ಶಾಸ್ತ್ರದಲ್ಲಿ ಹೇಳಿದ ದೇವರ ಲಕ್ಷಣ, ಪ್ರಭಾವಳಿ, ಅಂಗಾಗ, ಶಸ್ತ್ರ ಗಳನ್ನು ಏಕ ಶಿಲೆಯಲ್ಲಿ ಕೆತ್ತಿದ್ದೇನೆ. ಪೀಠ, ಪ್ರಭಾವಳಿ ಸೇರಿ 7ಅಡಿ 4 ಇಂಚು ಎತ್ತರದ ರಾಮಲಲ್ಲಾನ ಮೂರ್ತಿಯನ್ನು ಕೆತ್ತಿದ್ದೇನೆ' ಎಂದು ಗಣೇಶ ಭಟ್ಟ ತಿಳಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಗಣೇಶ ಭಟ್ಟ ಅವರು ಭಾರತೀಯ ಶಿಲ್ಪ ಕಲೆಯನ್ನು ಅರಗಿಸಿಕೊಂಡಿರುವ ಅಪರೂಪದ ಶಿಲ್ಪಿಯಾಗಿದ್ದಾರೆ. ಇಡಗುಂಜಿಯ ಮುಖ್ಯ ಅರ್ಚಕರಲ್ಲಿ ಒಬ್ಬರಾದ ಲಕ್ಷ್ಮೀ ನಾರಾಯಣ ಹಾಗೂ ಮಹಂಕಾಳಿ ಭಟ್ಟ ದಂಪತಿಯ ಪುತ್ರರಾಗಿರುವ ಗಣೇಶ ಭಟ್ಟ ಅವರು, ಇಲ್ಲೇ ಪ್ರಾಥಮಿಕ ಶಿಕ್ಷಣದ ಜತೆ ವೈದಿಕ, ಶಿಕ್ಷಣ ಹಾಗೂ ಭಾರತೀಯ ಶಿಲ್ಪ ಶಾಸ್ತ್ರದ ಶಿಕ್ಷಣವನ್ನೂ ಪಡೆದರು. ಸಾಗರದ ಕೆ.ಜಿ. ಶಾಂತಪ್ಪ ಹಾಗೂ ಕರಕುಶಲ ಕೇಂದ್ರದಲ್ಲಿ ಶ್ರೀಗಂಧದ ಕೆತ್ತನೆಯ ಅಭ್ಯಾಸ, ಬೆಂಗಳೂರಿನ ಖ್ಯಾತ ಶಿಲ್ಪಿ ದೇವಲಕುಂಡ ವಾದಿರಾಜರಲ್ಲಿ 10 ವರ್ಷ ಶಿಲ್ಪ ಶಿಕ್ಷಣ ಮತ್ತು ವಿದ್ಯಾಲಂಕಾರ ಶಿಕ್ಷಣ, ಎಸ್.ಕೆ. ರಾಮಚಂದ್ರರಾವ್ ಅವರಲ್ಲಿ ಭಾರತೀಯ ಶಿಲ್ಪಶಾಸ್ತ್ರದ ಅಧ್ಯಯನ ಮಾಡಿದ್ದಾರೆ. 18 ವರ್ಷ ಕಲಾ ಶಿಕ್ಷಕರಾಗಿದ್ದರು. ಕೆನರಾ ಬ್ಯಾಂಕ ಪ್ರಾಯೋಜಿತ ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿದ್ದರು.
ಇದನ್ನೂ ಓದಿ: ಶ್ರೀ ಮಹಾಸತಿ ಅಮ್ಮನವರ ಜಾತ್ರೆ 23ರಿಂದ