

ಎರಡು ವರ್ಷಗಳ ಕಾಲ ಕೋವಿಡ್ ಸೃಷ್ಟಿಸಿದ ಬಿಕ್ಕಟ್ಟಿಗೆ ಜಗತ್ತಿನಾದ್ಯಂತ ಅತಿ ದುಬಾರಿ ಬೆಲೆ ತೆತ್ತಿದ್ದು ಪ್ರದರ್ಶನ ಕಲಾವಿದರು. ಕೋವಿಡ್ ಲಾಕ್ ಡೌನ್ ಹಾಗು ಬಿಗಿ ನಿಯಮಗಳ ಕಾರಣದಿಂದಾಗಿ ಪ್ರದರ್ಶನಗಳು ನಡೆಯದೆ ಸಾವಿರಾರು ಕಲಾವಿದರು ತಮ್ಮ ಜೀವನೋಪಾಯವನ್ನು ಕಳೆದುಕೊಂಡಿದ್ದರು. ಕೋವಿಡ್ ಸೃಷ್ಟಿಸಿದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಸಾಧ್ಯವಾಗದೆ ಅನೇಕ ಕಂಪನಿಗಳು ಮುಚ್ಚಿರುವುದು ಕೂಡಾ ಎಲ್ಲರಿಗೂ ತಿಳಿದಿರುವ ಸಂಗತಿ. ಅವುಗಳಲ್ಲಿ ಸರ್ಕಸ್ ಕಂಪನಿ ಕಲಾವಿದರು ಪ್ರಮುಖರು. ಆದರೆ ವಿಶ್ವವಿಖ್ಯಾತ ರಾಂಬೋ ಸರ್ಕಸ್ ಈ ಬಿಕ್ಕಟ್ಟಿನ ಸವಾಲನ್ನು ಎದುರಿಸಿ ಮತ್ತೆ ಪ್ರದರ್ಶನ ನೀಡಲಾಂಭಿಸಿದೆ. ಸದ್ಯ ಬೆಂಗಳೂರಿನಲ್ಲಿ ಕೋವಿಡ್ ಬಳಿಕ ರಾಂಬೋ ಸರ್ಕಸ್ ಪ್ರದರ್ಶನ ನೀಡಲು ಸಜ್ಜಾಗಿದೆ.
ಮೈಸೂರು ರಸ್ತೆಯ ಕೆಂಗೇರಿ ಬಸ್ ನಿಲ್ದಾಣ ಮತ್ತು ಮೆಟ್ರೋ ಸ್ಟೇಷನ್ ಸಮೀಪ ಸಾಂಪ್ರದಾಯಿಕ ಸರ್ಕಸ್ ಕೌಶಲ್ಯ ಮತ್ತು ಸಾಹಸಗಳ ಪರಿಚಯವಿಲ್ಲದ ಹೊಸ ಪೀಳಿಗೆಯ ಮಕ್ಕಳಿಗೆ ಹಾಗು ಯುವಜನರಿಗೆ ಸರ್ಕಸ್ ರಸದೌತಣ ನೀಡಲಿದೆ. ಈಗಾಗಲೇ ಪ್ರದರ್ಶನಕ್ಕೆ ಸಿದ್ಧವಾಗಿದ್ದು, ಅ.31 ರವರೆಗೆ ಪ್ರದರ್ಶನ ನಡೆಯಲಿದೆ.
“ಕಠಿಣ ಕೋವಿಡ್ ಸಮಯದಲ್ಲಿ ಸರ್ಕಸ್ ಪ್ರೇಮಿಗಳ ಅಚಲ ಬೆಂಬಲವೇ ನಮ್ಮನ್ನು ಈ ಸೇವೆ ಮುಂದುವರಿಸುವಂತೆ ಮಾಡಿದೆ. ಅನೇಕ ಸಂಸ್ಥೆಗಳು ಕೋವಿಡ್ ಹೊಡೆತ ತಡೆಯಲಾಗದೆ ಮುಚ್ಚಿ ಹೋದವು. ಆದರೆ ಜನರ ನಂಬಿಕೆ - ಪ್ರೀತಿ ನಮ್ಮನ್ನು ಈ ಕ್ಷೇತ್ರದಲ್ಲಿ ಮುಂದುವರಿಯುವಂತೆ ಮಾಡಿದೆ. ಈ ಅವಧಿಯಲ್ಲಿ ಪ್ರೇಕ್ಷಕರನ್ನು ತಲುಪಲು ನವೀನ ಮಾರ್ಗಗಳನ್ನು ನಾವು ಕಂಡುಕೊಂಡೆವು. ಆನ್ಲೈನ್ ಸರ್ಕಸ್ ಪ್ರದರ್ಶನಗಳು ಮತ್ತು ಜೂಮ್, ತಂಡಗಳು ಮತ್ತು ಯೂಟ್ಯೂಬ್ ಖಾತೆ ಹೀಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರದರ್ಶನವನ್ನು ಉಳಿಸಿಕೊಂಡು ಮತ್ತೆ ಸರ್ಕಸ್ ಪ್ರೇಮಿಗಳ ಮನಸೂರೆಗೊಳ್ಳಲು ಸಿದ್ಧರಾಗಿದ್ದೇವೆ ಎಂದು ಸಂಸ್ಥೆಯ ಮಾಲೀಕ ಸುಜಿತ್ ದೀಲಿಪ್ ತಿಳಿಸಿದ್ದಾರೆ.
ಈ ಸರ್ಕಸ್ ಪ್ರದರ್ಶನದಲ್ಲಿ 60 ಕಲಾವಿದರು ಸುಮಾರು 2 ಗಂಟೆಯ ಅವಧಿಯಲ್ಲಿ ಪ್ರೇಕ್ಷಕರನ್ನು ಸಮ್ಮೋಹನಗೊಳಿಸುವ ಮತ್ತು ಮಂತ್ರಮುಗ್ದಗೊಳಿಸುವ ಪ್ರದರ್ಶನ ನೀಡುತ್ತಾರೆ. ನೋಡುಗರನ್ನು ಹೊಸ ಲೋಕಕ್ಕೆ ಕೊಂಡೊಯ್ಯುತ್ತಾರೆ. ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಕ್ಯೂಬ್ ಜಗ್ಲಿಂಗ್, ರೋಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ ಪ್ರದರ್ಶನಗಳು ಪ್ರೇಕ್ಷಕರನ್ನು ಹೊಸ ಜಗತ್ತಿಗೆ ಕೊಂಡೊಯ್ಯಲಿವೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ 83085 36479.