

ಬೆಂಗಳೂರು: 'ರಾಮಾಯಣ'ವು ಸಂವೇದನೆಗಳ ಮೊತ್ತವಾಗಿದ್ದು, ಕ್ರಿಯೆಗಳು ನಡೆಯುವುದಿಲ್ಲ. ಆದರೆ 'ಮಹಾಭಾರತ'ದಲ್ಲಿ ಸಾವಿರಾರು ಕ್ರಿಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವಿದ್ವಾಂಸ ಜಗದೀಶ ಶರ್ಮಾ ಸಂಪ ಹೇಳಿದ್ದಾರೆ.
ಕದಂಬ ಪ್ರಕಾಶನ ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನ ವಾಡಿಯಾ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ರುಕ್ಮಿಣಿ ರಘುರಾಮ್ ರಚನೆಯ 'ರಾಮಾಯಣ ಪರೀಕ್ಷಣಂ-ಪಾತ್ರ ಕಥಾ ಮಾಲಿಕ' ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ರಾಮಾಯಣದಲ್ಲಿ ಕೆಲವೇ ಕ್ರಿಯೆಗಳು ಕಾಣಿಸಿಕೊಂಡರೂ, ಅದರಲ್ಲಿ ಭಾವ ತುಂಬಿಕೊಂಡಿದೆ. ಯಾರೂ ಊಹಿಸಲು ಸಾಧ್ಯವಾಗದಷ್ಟು ಸೂಕ್ಷ್ಮ ಸಂವೇದನೆಗಳನ್ನು ರಾಮಾಯಣ ಒಳಗೊಂಡಿದೆ. ರಾಮಾಯಣ ಓದಿ, ಅದರಲ್ಲಿ ಏನಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇವೆಯೋ, ಅದಷ್ಟೂ ಅಲ್ಲದ ಹೊಸ ಸೂಕ್ಷ್ಮತೆಗಳನ್ನು ಅದರಲ್ಲಿ ಗುರುತಿಸಲು ಸಾಧ್ಯವಿದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ, ಇನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಳ್ಳವುದು, ಆಸೆಯನ್ನು ಈಡೇರಿಸುವುದು ಸೇರಿ ವಿವಿಧ ರೀತಿಯಲ್ಲಿ ರಾಮಾಯಣ ಸಂವೇದನಾಪೂರ್ಣವಾಗಿ ವರ್ತಿಸುತ್ತದೆ ಎಂದರು.
ವಾನರರ ಗುಂಪು, ಜಟಾಯು, ಸಂಪಾತಿಯಂತಹ ಪಗಳು ರಾಮಾಯಣವನ್ನು ಆವರಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ ಮಾತು ಬಾರದವರೊಂದಿಗೆ ಸಂವಹನ ನಡೆಯುತ್ತದೆ. ಇದರಿಂದ ಸಂವೇದನೆ ಎಷ್ಟು ಸೂಕ್ಷ್ಮವಾಗಿರಬೇಕು ಎಂಬುವುದು ತಿಳಿದುಬರುತ್ತದೆ ಎಂದು ತಿಳಿಸಿದರು.
ನೆಹರು ತಾರಾಯಲದ ನಿರ್ದೇಶಕ ಡಾ.ಬಿ.ಆರ್. ಗುರುಪ್ರಸಾದ್ ಮಾತನಾಡಿ, ನಿರೂಪಣೆ ಶಕ್ತಿಯುತವಾಗಿದ್ದಾಗ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ಇದಕ್ಕೆ ಪೂರಕವಾಗಿ "ರಾಮಾಯಣ ಪರೀಕ್ಷಣ' ಕೃತಿ ಮೂಡಿಬಂದಿದೆ. ಈ ಪುಸ್ತಕ ರಾಮಾಯಣದ ಕುರಿತೇ ಆಗಿದ್ದರೂ ನಮ್ಮ ಸಂಸತಿಯ ಬಗ್ಗೆ ನಮಗೆ ಅರಿವಿಲ್ಲದ ಅಂಶಗಳನ್ನು ಮನವರಿಕೆ ಮಾಡುತ್ತದೆ. ಹೀಗಾಗಿ ಆ ಬಗ್ಗೆ ತಿಳಿದುಕೊಳ್ಳಲು ನಿಯಮಿತ ಓದು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಮಾಯಣ ಬಹುತೇಕರಿಗೆ ಗೊತ್ತಿದೆ. ರಾಮ, ಲಲಕ್ಷ್ಮಣ, ಸೀತೆ ಇತ್ಯಾದಿ ಪಾತ್ರಗಳು ಚಿರಪರಿಚಿತವಾಗಿವೆ. ಆದರೆ ಈ ಕೃತಿಯಲ್ಲಿ ರಾಮನ ಪೌರುಶ, ಅಹಲ್ಯೆಯ ಪ್ರಶ್ನೆ, ಊರ್ಮಿಳೆಯ ಚಿಂತೆ, ಭರತನ ಸಂದೇಹ, ಶತ್ರ್ನುನ ಕುತೂಹಲ, ಲಕ್ಷ್ಮಣನ ಉತ್ತರ, ಸೀತೆಯ ತಲ್ಲಣ ಮುಂತಾದ ಪಾತ್ರಗಳನ್ನು ಮತ್ತಷ್ಟು ಅರ್ಥ ಮಾಡಿಕೊಳ್ಳಲು ನೆರವಾಗಿದೆ ಎಂದರು. ಲೇಖಕಿ ಡಾ.ರುಕ್ಮಿಣಿ ರಘುರಾಮ್ ಇದ್ದರು.