

ಚನ್ನಪಟ್ಟಣ:
ರಾಮಾಯಾಣ ಗ್ರಂಥದ ಮೂಲಕ ಜಗತ್ತಿಗೆ ಜ್ಞಾನದ ಬೆಳಕು ನೀಡಿದ ಮಹರ್ಷಿ ವಾಲ್ಮೀಕಿಯಂತಹ ಮಹಾಕವಿಗಳು ಈ ಭೂಮಿಯ ಮಹಾ ಸೌಭಾಗ್ಯ ಎಂದು ತಹಸೀಲ್ದಾರ್ ಬಿ.ಎನ್.ಗಿರೀಶ್ ತಿಳಿಸಿದರು.
ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯ ಸರಳ ಕಾರ್ಯಕ್ರಮದಲ್ಲಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಕೇವಲ ವ್ಯಕ್ತಿಯಲ್ಲ, ಅವರೊಂದು ಮಹಾನ್ ಶಕ್ತಿ. ಅವರು ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿನ ಎಲ್ಲಾ ಪಾತ್ರಗಳು ಆಧ್ಯಾತ್ಮಿಕ, ಸಾಮಾಜಿಕ ನ್ಯಾಯ, ಮಾನವೀಯತೆ ಮತ್ತು ವಿಶ್ವಭ್ರಾತೃತ್ವದ ಪ್ರತೀಕವಾಗಿವೆ. ಈ ಕಾವ್ಯ ಭಾರತೀಯ ಸಮಾಜದ ಮೇಲೆ ಉತ್ತಮ ಪ್ರಭಾವ ಬೀರಿವೆ ಎಂದರು.
ಈ ಮಹಾಕಾವ್ಯದಲ್ಲಿ ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ, ಅತಿಥಿದೇವೋಭವದಂತಹ ಮೌಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಮಮತೆ, ಸಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸಲಾಗಿದೆ. ಎಲ್ಲಿಯವರೆಗೆ ಭೂಮಿಯಲ್ಲಿ ಪರ್ವತ ,ಸಮುದ್ರ ನದಿಗಳಿರುತ್ತವೆಯೋ ಅಲ್ಲಿಯವರೆಗೂ ರಾಮಾಯಣ ಕಾವ್ಯ ಲೋಕದಲ್ಲಿ ಪ್ರಚಲಿತದಲ್ಲಿರುತ್ತದೆ , ಸೂರ್ಯಚಂದ್ರರಿರುವರೆಗೂ ಈ ಜಗತ್ತಿನಲ್ಲಿ ಅಮರಕಾವ್ಯವಾಗಿರುತ್ತದೆ ಎಂದು ಬಣ್ಣಿಸಿದರು.
ರಾಮಾಯಣವು ಭಾರತೀಯರ ಜೀವನಚರಿತ್ರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ವಾಲ್ಮೀಕಿಯು ರಾಮಾಯಣದಲ್ಲಿ ವಿವಿಧ ಪಾತ್ರಗಳ ಮುಖಾಂತರ ಕೌಟುಂಬಿಕ ಮೌಲ್ಯಗಳು ಮತ್ತು ಆದರ್ಶ ವ್ಯಕ್ತಿಯ ಗುಣಲಕ್ಷಣಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವಯುತವಾದ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ. ವಾಲ್ಮೀಕಿಯವರ ಹೆಸರು ಸದಾ ಚಿರಸ್ಥಾಯಿ ಎಂದರು.
ಈ ವೇಳೆ ತಾಪಂ ಇಒ ಸಂದೀಪ್, ಪೌರಾಯುಕ್ತ ಮಹೇಂದ್ರ, ಬಿಇಒ ರಾಮಲಿಂಗಯ್ಯ, ಸಿಡಿಪಿಓ ಪ್ರಮೀಳಾ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಧುರಾ, ನಗರ ಬೆಸ್ಕಾಂ ಎಇಇ ಬಿ.ಸಿ.ಪುಷ್ಪ ಸೇರಿದಂತೆ ಹಲವರು ಇದ್ದರು.