

ಕೊಳ್ಳೇಗಾಲ: ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಗುರುವಾರ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭ ಆಯೋಜಿಸಲಾಗಿತ್ತು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ನಾಯಕ ಜನಾಂಗದವರ ಬಹುದಿನದ ಬೇಡಿಕೆಯಂತೆ ಜಿಲ್ಲಾ ಕಚೇರಿ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಲು ಒಪ್ಪಿದ್ದಾರೆ. ಆ ಪುತ್ಥಳಿ ಜತೆಗೆ ಕನಕ ದಾಸರು ಹಾಗೂ ಭಗೀರಥರ ಪುತ್ಥಳಿ ಶಂಕುಸ್ಥಾಪನೆಗೂ ಚಾಲನೆ ನೀಡಲಿದ್ದಾರೆ. ಇದ್ದರಿಂದ ಈ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ನಾಯಕ ಜನಾಂಗ, ಕುರುಬ ಜನಾಂಗ, ಉಪ್ಪಾರ ಜನಾಂಗದವರ ಬಹುದಿನದ ಬಯಕೆ ಈಡೇರಿದಂತಾಗುತ್ತದೆ ಎಂದು ತಿಳಿಸಿದರು.
ವಾಲ್ಮೀಕಿ ಮಹರ್ಷಿ ರಚಿಸಿರುವ ರಾಮಾಯಣ ಎಲ್ಲ ಜನಾಂಗದವರಿಗೂ ಪವಿತ್ರ ಗ್ರಂಥವಾಗಿದ್ದು, ಜನಸಾಮಾನ್ಯರಿಗೆ ಜೀವನ ಮೌಲ್ಯ ಕಲಿಸುವಂತಹ ಗ್ರಂಥವಾಗಿದೆ. ಅವರ ಈ ತತ್ವವನ್ನು ಅನುಸರಿಸಿ ನಿಮ್ಮ ಜೀವನ ಸುಗಮಗೊಳಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಮುಖ್ಯ ಭಾಷಣಕಾರರು ಶಿಕ್ಷಕ ಶೈಲೇಂದ್ರ ಅವರು ವಾಲ್ಮೀಕಿ ಮಹರ್ಷಿಗಳ ಕುರಿತು ಮಾತನಾಡಿದರು.
ಇದೇ ಸಂದರ್ಭದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹವಾಗಿದ್ದ ಎರಡು ಜೋಡಿ ದಂಪತಿಗೆ ಒಂದೂವರೆ ಲಕ್ಷ ರೂ.ಬೆಲೆ ಬಾಳುವ ಬ್ಯಾಂಕ್ ಠೇವಣಿ ಪತ್ರವನ್ನು ವಿತರಿಸಲಾಯಿತು. ಸ್ಥಳೀಯ ನಾಯಕ ಜನಾಂಗದ ಮುಖಂಡರು ಗೈರಾಗಿದ್ದು ಎದ್ದು ಕಾಣುತ್ತಿತ್ತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರು, ನಗರಸಭೆ ಅಧ್ಯಕ್ಷೆ ರೇಖಾ, ಪೌರಯುಕ್ತ ರಮೇಶ್, ಬಿಇಒ ಮಂಜುಳಾ, ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿ ರಾಜೇಶ್ ಹಾಗೂ ಎಲ್ಲ ಅಧಿಕಾರಿಗಳು ಇತರರಿದ್ದರು.