

ಕಿಕ್ಕೇರಿ: ಪಟ್ಟಣದ ಸುಬ್ಬರಾಯಛತ್ರದಲ್ಲಿ ವಿಪ್ರ ಬಾಂಧವ ಸೇವಾ ಸಮಿತಿಯಿಂದ ಆಯೋಜಿಸಿದ್ದ ರಾಮತಾರಕ ಜಪ ಮಂತ್ರ ರಾಮತಾರಕ ಯಜ್ಞದೊಂದಿಗೆ ಸಂಪನ್ನಗೊಂಡಿತು.
1008ಸಂಖ್ಯೆಯಲ್ಲಿ ಮಹಿಳೆಯರು, ವಿಪ್ರರು ವಾರದಿಂದ ಒಟ್ಟು 1.40 ಲಕ್ಷ ಬಾರಿ ರಾಮತಾರಕ ಜಪಿಸಿದರು. ನಿತ್ಯ ಸಂಜೆ ರಾಮದೇವರು, ಮಾರುತಿ ದೇವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಮಹಾಮಂಗಳಾರತಿ ಮಾಡಲಾಯಿತು.
ಅಂತಿಮ ದಿನವಾದ ಭಾನುವಾರ ವಿಶೇಷವಾಗಿ ಲೋಕಕಲ್ಯಾಣಾರ್ಥ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ನಿರ್ವಿಘ್ನವಾಗಿ ನೆರವೇರಲು ವೇದಬ್ರಹ್ಮಶ್ರೀ ಗೋಪಾಲಕೃಷ್ಣ ಅವಧಾನಿ, ಅನಿಲ್ ಶಾಸ್ತ್ರಿ ನೇತೃತ್ವದಲ್ಲಿ ಹೋಮ ನೆರವೇರಿತು. ಅಷ್ಟ, ಮಂಗಳ ದ್ರವ್ಯವನ್ನು ಹೋಮ ಕುಂಡಕ್ಕೆ ಅರ್ಪಿಸಲಾಯಿತು. ನವಗ್ರಹ ಪೂಜೆ, ಕಳಸ ಸ್ಥಾಪನೆ ಮಾಡಿ ಶ್ರೀರಾಮ ದೇವರಿಗೆ ಪಂಚಾಮೃತ, ರುದ್ರಾಭಿಷೇಕ ನೆರವೇರಿಸಲಾಯಿತು. ಹನುಮ ದೇವರಿಗೆ ಮಧು ಮಿಶ್ರಿತ ಕದಲಿ(ಬಾಳೆಹಣ್ಣು) ಹೋಮ ಸಮರ್ಪಿಸಲಾಯಿತು.
ಕೆ.ಆರ್.ಪೇಟೆ, ಮಂದಗೆರೆ, ಮಾದಾಪುರ, ಅಯ್ಯನಕೊಪ್ಪಲು, ಕುಪ್ಪಹಳ್ಳಿ, ಆನೆಗೊಳದಿಂದ ವಿಪ್ರರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ರಾಮದೇವರ, ಹನುಮ ದೇವರನ್ನು ಭಕ್ತಿಯಿಂದ ಪೂಜಿಸಿದರು. ಸಾಮೂಹಿಕ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಸಮಿತಿ ಅಧ್ಯಕ್ಷ ಕೆ.ಎಸ್.ಅನಂತಸ್ವಾಮಿ, ಕಾರ್ಯದರ್ಶಿ ಕೆ.ಬಿ.ವೆಂಕಟೇಶ್, ಶ್ರೀಹರಿ, ಮಧು ಶರ್ಮ, ಮಹಬಲಶರ್ಮ, ಕೆ.ಎಸ್. ಪ್ರಭಾಕರ್, ಗಣೇಶ್‌ರಾವ್, ಕೆ.ಎಸ್.ಪರಮೇಶ್ವರಯ್ಯ, ಸೀತಾರಾಮು, ರಾಂಪ್ರಸಾದ್, ರಾಮಣ್ಣ ಮಾಸ್ಟರ್, ನರಸಿಂಹ, ಮಹಾಬಲರಾವ್, ರಾಂಪ್ರಸಾದ್, ಆನಂದಮೂರ್ತಿ, ಅರವಿಂದ ಕಾರಂತ, ಗಿರಿಜಮ್ಮ, ರಜಿನಿ, ಸುಮಾ, ವೇದಾವತಿ, ಭಾಗ್ಯಮ್ಮ, ಸ್ವರ್ಣಾ, ಕಲಾವತಿ, ಮೇಘಶ್ರೀ ಮತ್ತಿತರರಿದ್ದರು.