ಜಿಲ್ಲೆಯಲ್ಲಿ ಪಶು ವೈದ್ಯರ ಕೊರತೆ ರಾಮನಗರದಲ್ಲಿ 22, ಕನಕಪುರ ತಾಲೂಕಿನಲ್ಲಿ 11 ವೈದ್ಯರ ಹುದ್ದೆ ಖಾಲಿ

Kailancha-Ph-003-Pasu Hospital Doctors Korathe- Hasu Chitra-3-9-2023
Published on

ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹೋಬಳಿಯ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಉಂಟಾಗಿದ್ದು, ಜಾನುವಾರುಗಳ ಆರೋಗ್ಯ ರಕ್ಷಣೆಯೇ ರೈತರಿಗೆ ದೊಡ್ಡ ಸವಾಲಾಗಿದೆ. ವೈದ್ಯರ ಕೊರತೆ ನೀಗಿಸುವಂತೆ ಸಾರ್ವಜನಿಕರು ಪಶುಪಾಲನಾ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಹೋಬಳಿಯಲ್ಲಿ ಹುಲಿಕೆರೆ, ಕೈಲಾಂಚ, ಬನ್ನಿಕುಪ್ಪೆ, ಎಸ್‌ಆರ್‌ಎಸ್ ಬೆಟ್ಟಗಳಲ್ಲಿ ಪಶು ಆಸ್ಪತ್ರೆ ಇದ್ದು ಹುಣಸನಹಳ್ಳಿ, ತುಂಬೇನಹಳ್ಳಿಯಲ್ಲಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳಿವೆ. ಬನ್ನಿಕುಪ್ಪೆಯಲ್ಲಿ ಮಾತ್ರ ವೈದ್ಯರಿದ್ದಾರೆ. ಹುಲಿಕೆರೆ, ಕೈಲಾಂಚ, ಎಸ್‌ಆರ್‌ಎಸ್ ಬೆಟ್ಟಗಳಲ್ಲಿ ವೈದ್ಯರಿಲ್ಲ.

ಹುಲಿಕೆರೆಯಲ್ಲಿ ಕಳೆದ ಎರಡು ವರ್ಷದಿಂದ ಕೈಲಾಂಚದಲ್ಲಿ ಎರಡು ತಿಂಗಳಿಂದ ವೈದ್ಯರಿಲ್ಲ. ಎಸ್‌ಆರ್‌ಎಸ್ ಬೆಟ್ಟ ಆಸ್ಪತ್ರೆ ಹುದ್ದೆಯನ್ನೇ ರದ್ದುಪಡಿಸಿ ಜಾನುವಾರು ಪರಿವೀಕ್ಷಕರ ಹುದ್ದೆಗಷ್ಟೇ ಸೀಮಿತ ಮಾಡಲಾಗಿದೆ. ಮೂರು ಆಸ್ಪತ್ರೆ ಜತೆಗೆ ಎರಡು ಪ್ರಾಥಮಿಕ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳಲ್ಲಿ 9 ಸಾವಿರಕ್ಕೂ ಹೆಚ್ಚಿನ ಜಾನುವಾರುಗಳಿವೆ. ಪ್ರತಿದಿನ ರೈತರಿಗೆ ಚಿಕಿತ್ಸೆಗಾಗಿ ಪರದಾಡುವಂತಾಗಿದೆ.

ಅರ್ಕಾವತಿ ನದಿ ಈ ಭಾಗದಲ್ಲೇ ಹರಿಯುವ ಕಾರಣ ಹೆಚ್ಚಾಗಿ ರೈತರು ನೀರಾವರಿಯಲ್ಲಿ ಹಸಿರು ಮೇವು ಬೆಳೆಯುವ ಕಾರಣ ಜೀವನ ನಿರ್ವಹಣೆಗಾಗಿ ಹೈನುಗಾರಿಕೆ ಅವಲಂಬಿಸಿದ್ದಾರೆ. ಮೇಕೆ, ಕುರಿ, ನಾಟಿ ಹಸು, ಎಮ್ಮೆಗಳನ್ನು ಸಾಕಿದ್ದಾರೆ.

ಸುತ್ತಮುತ್ತಲ ಗ್ರಾಮಗಳ ಪ್ರದೇಶಕ್ಕೆ ಅರಣ್ಯ ಪ್ರದೇಶ ಹೊಂದಿಕೊಂಡಿರುವ ಕಾರಣ ವನ್ಯ ಪ್ರಾಣಿಗಳ ಉಪಟಳ ಇದೆ. ಒಂದಲ್ಲಾ ಒಂದು ಪ್ರದೇಶದಲ್ಲಿ ಚಿರತೆ, ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸುತ್ತವೆ. ಜತೆಗೆ ಹಾವು ಕಡಿತ, ನಾಯಿಗಳ ಕಡಿತಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆತರೆ ರೈತರ ಸಾಕು ಪ್ರಾಣಿಗಳು ಬದುಕುಳಿಯುತ್ತವೆ. ಆದರೆ, ವೈದ್ಯರಿಲ್ಲದೆ ಜಾನುವಾರುಗಳಿಗೆ ಚಿಕಿತ್ಸೆ ದೂರವಾಗಿದೆ ಎಂಬ ಅಳಲು ಸಾರ್ವಜನಿಕರದ್ದು.

ಹೋಬಳಿ ಕೇಂದ್ರ ಆಸ್ಪತ್ರೆಯಲ್ಲೇ ವೈದ್ಯರಿಲ್ಲ :

ಕೈಲಾಂಚ ಗ್ರಾಪಂ ಕೇಂದ್ರವಾಗಿದ್ದು, ಪ್ರತಿನಿತ್ಯ 2 ಸಾವಿರ ಲೀಟರ್ ಹಾಲು ಶೇಖರಣೆ ಆಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ರೈತರು ಜಾನುವಾರು ಸಾಕಿದ್ದಾರೆ. ಜತೆಗೆ ನಾಗೋಹಳ್ಳಿ, ಗೌಡಯ್ಯನದೊಡ್ಡಿ ಗ್ರಾಮಗಳು ಗ್ರಾಮಕ್ಕೆ ಹೊಂದಿಕೊಂಡಿವೆ. ನುರಿತ ತಜ್ಞ ವೈದ್ಯ ಹುದ್ದೆ ಹೊಂದಿರುವ ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿಂದ ವೈದ್ಯರ ಕೊರತೆ ಎದುರಿಸುತ್ತಿದೆ. ಪಶು ಪಾಲನಾ ಪರಿವೀಕ್ಷಕರು ನಿವೃತ್ತಿ ಹೊಂದಿ ಆ ಸ್ಥಾನವೂ ಖಾಲಿ ಇದೆ.

ಕಾಯಂ ತಜ್ಞ ವೈದ್ಯರ ನೇಮಿಸಿ

ಹುಲಿಕೆರೆ, ಕೈಲಾಂಚ ಪಶು ಆಸ್ಪತ್ರೆಗಳಿಗೆ ಬೇರೆ ಆಸ್ಪತ್ರೆ ವೈದ್ಯರನ್ನು ಎರವಲು ಮಾಡಲಾಗಿದೆ. ಆದರೆ, ಹೆಚ್ಚಿನ ಜಾನುವಾರು ಇರುವ ಕಾರಣ ಪ್ರತಿದಿನ ವೈದ್ಯರು ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಜಾನುವಾರುಗಳಿಗೆ ಕಾಲಕಾಲಕ್ಕೆ ಚಿಕಿತ್ಸೆ ನೀಡಿದರಷ್ಟೇ ಚರ್ಮಗಂಟು ರೋಗ, ಕೆಚ್ಚಲು ಬಾಹು, ಗಾಯ, ಮತ್ತಿತರ ಕಾಯಿಲೆಗಳನ್ನು ಪ್ರಾರಂಭಿಕ ಹಂತದಲ್ಲಿಯೇ ತಡೆಗಟ್ಟಬಹುದು. ಕೂಡಲೇ ಕೈಲಾಂಚ ಮತ್ತು ಹುಲಿಕೆರೆ ಆಸ್ಪತ್ರೆಗಳಲ್ಲಿ ಕಾಯಂ ತಜ್ಞ ಪಶು ವೈದ್ಯರನ್ನು ಸರ್ಕಾರ ನೇಮಿಸಬೇಕು ಎಂದು ರೈತ ಮುಖಂಡ ಗೋಪಾಲನಾಯ್ಕ ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ 22, ಕನಕಪುರ ತಾಲೂಕಿನಲ್ಲಿ 11 ಪಶು ವೈದ್ಯರ ಹುದ್ದೆ ಖಾಲಿಯಿದೆ. ಅಂತಹ ಪಶು ಚಿಕಿತ್ಸಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಜಿಲ್ಲೆಯ ಯಾವುದೇ ಆಸ್ಪತ್ರೆಯಲ್ಲೂ ಜಾನುವಾರು ಚಿಕಿತ್ಸೆಗೆ ತೊಂದರೆ ಆಗದಂತೆ ಬೇರೆ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಯನ್ನು ಖಾಲಿ ಜಾಗಕ್ಕೆ ನಿಯೋಜಿಸಿ ಜಾನುವಾರುಗಳ ಚಿಕಿತ್ಸೆಗೆ ಸಮಸ್ಯೆ ಆಗದಂತೆ ಕ್ರಮ ವಹಿಸಲಾಗಿದೆ.

ಡಾ. ಆಂಜನಪ್ಪ, ಉಪನಿರ್ದೇಶಕ, ಪಶುಪಾಲನಾ ಇಲಾಖೆ, ರಾಮನಗರ

ಪ್ರತೀ ರೈತರ ಮನೆಯಲ್ಲಿ ನಾಲ್ಕೈದು ಜಾನುವಾರುಗಳಿವೆ. ಹೈನುಗಾರಿಕೆ ಪ್ರಮುಖವಾಗಿರುವ ಕಾರಣ ರಾಸುಗಳಿಗೆ ಕಾಲಕಾಲಕ್ಕೆ ಚಿಕಿತ್ಸೆ ಕೊಡಿಸಬೇಕು. ತಜ್ಞ ವೈದ್ಯರಿದ್ದ ಕಾರಣ ಕೈಲಾಂಚ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆತು ಯಾವ ಸಮಸ್ಯೆ ಇರಲಿಲ್ಲ. ಈಗ ವೈದ್ಯರಿಲ್ಲದ ಕಾರಣ ಜಾನುವಾರುಗಳಿಗೆ ಚಿಕಿತ್ಸೆ ದೂರವಾಗಿದ್ದು ಸಮಸ್ಯೆ ಎದುರಿಸುವಂತಾಗಿದೆ. ಸರ್ಕಾರ ಕೂಡಲೇ ಪಶುವೈದ್ಯರ ನೇಮಕಕ್ಕೆ ಮುಂದಾಗಬೇಕು.

ಎನ್.ಎಸ್. ಲಿಂಗೇಗೌಡ, ನಾಗೋಹಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net