ಮಾಗಡಿ ಜೆಡಿಎಸ್ ಮುಖಂಡನ ಮನೆಗೆ ಡಿ.ಕೆ. ಸುರೇಶ್ ಭೇಟಿ

17 RMN-MGD P3
Published on

 ಮಾಗಡಿ

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಬಿಎಂಆರ್‌ಡಿಎ ಮಾಜಿ ಅಧ್ಯಕ್ಷ ಹಾಗೂ ಒಕ್ಕಲಿಗರ ಸಂಘದ ಮಾಜಿ ನಿರ್ದೆಶಕ ಕೆ. ಕೃಷ್ಣಮೂರ್ತಿ ಅವರ ಕೊಟ್ಟಿಗೆಪಾಳ್ಯದ ನಿವಾಸಕ್ಕೆ ಸಂಸದ ಡಿ.ಕೆ.ಸುರೇಶ್ ಗುರುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎ.ಮಂಜುನಾಥ್ ಅವರನ್ನು ಗೆಲ್ಲಿಸಲು ಪ್ರಮುಖ ಪಾತ್ರ ವಹಿಸಿದ್ದ ಕೃಷ್ಣಮೂರ್ತಿ ಈ ಬಾರಿ ಚುನಾವಣೆಯಲ್ಲಿಯೂ ಎ.ಮಂಜುನಾಥ್ ಪರವಾಗಿ ಶ್ರಮಿಸಿದ್ದರು. ಎ.ಮಂಜುನಾಥ್ ಸೋತ ಬಳಿಕ ರಾಜಕಾರಣದಿಂದ ದೂರ ಸರಿದಿದ್ದ ಕೆ.ಕೃಷ್ಣಮೂರ್ತಿ ಇತ್ತೀಚೆಗೆ ಕಾಂಗ್ರೆಸ್ ಸೇರುತ್ತಾರೆಂಬ ವದಂತಿಗಳು ಹರಿದಾಡುತ್ತಿದ್ದವು. ಆದರೆ, ಕೃಷ್ಣಮೂರ್ತಿ ಜೆಡಿಎಸ್ ಪಕ್ಷ ಬಿಡುವುದಿಲ್ಲ ಎಂದು ಎ.ಮಂಜುನಾಥ್ ಹೇಳಿದ್ದರು. ಮಾಜಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ನಮ್ಮ ಬಳಿ ಇದ್ದವರು ಹೊರ ಹೋಗಿದ್ದರು, ಈಗ ಬರುತ್ತಿದ್ದಾರೆ ಎಂದಿದ್ದರು.

ಕಳೆದ 15 ದಿನಗಳ ಹಿಂದೆ ಕೆ.ಕೃಷ್ಣಮೂರ್ತಿ ಅವರಿಗೆ ಹೃದಯಾಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಆರೋಗ್ಯ ವಿಚಾರಿಸಲು ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿರುವುದು ಸಾಕಷ್ಟು ಚರ್ಚಗೆ ಗ್ರಾಸವಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹಾಗೂ ಮಾಗಡಿ ರಾಜಕೀಯ ವಿಚಾರವಾಗಿ ದೊಡ್ಡಮಟ್ಟದ ಬದಲಾವಣೆಯಾಗುವ ಮುನ್ಸೂಚನೆ ಇದ್ದು, ಈ ವೇಳೆ ರಾಜಕೀಯವಾಗಿ ವಿಚಾರವಾಗಿ ಚರ್ಚೆ ನಡೆಸಿದ್ದು, ಕೆ.ಕೃಷ್ಣಮೂರ್ತಿ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ವಿಚಾರವಾಗಿ ಸಂಸದರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net