

ಚನ್ನಪಟ್ಟಣ: 2023ರ ಚುನಾವಣೆ ಚನ್ನಪಟ್ಟಣದಲ್ಲಿನ ನನ್ನ ಕೊನೆ ಚುನಾವಣೆ 2028ಕ್ಕೆ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸುತ್ತೇನೆ ಆದರೆ ರಾಜಕೀಯಕ್ಕೆ ವಿಧಾಯ ಹೇಳಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಚನ್ನಪಟ್ಟಣದಲ್ಲಿ ನಡೆದ ಬಮೂಲ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ರಾಜಕೀಯ ವಿದಾಯ ಹೇಳುತ್ತಿಲ್ಲ, 2028ರ ವಿಧಾನಸಭೆಗೆ ಚನ್ನಪಟ್ಟಣದಿಂದ ಕಾರ್ತಕರ್ತರನ್ನ ನಿಲ್ಲಿಸುತ್ತೇನೆ, ಆಗ ಬೇರೆ ಕ್ಷೇತ್ರದಲ್ಲಿ ನಿಲ್ಲಬೇಕಾಗಬಹುದು. ನಾನು ಯಾವುದೇ ಕಾರಣಕ್ಕೂ ರಾಜಕೀಯ ಬಿಡಲ್ಲ. ಚನ್ನಪಟ್ಟಣದಲ್ಲಿ ಮಾತ್ರ 2023ಕ್ಕೆ ಕೊನೆಯ ಸ್ಪರ್ಧೆ. ಈ ಸಲ ಐದು ವರ್ಷದ ಸರ್ಕಾರ ತಂದು ಜನತೆಯ ಬದುಕಿಗೆ ಭರವಸೆ ಈಡೇರಿಸುತ್ತೇನೆ. ನಂತರ ನಾನು ವಿಶ್ವಾಂತ್ರಿ ತೆಗೆದುಕೊಳ್ಳಬೇಕಲ್ವಾ ಅದಕ್ಕೆ ಕೊನೆಯ ವಿಧಾನಸಭೆ ಚುನಾವಣೆ ಅಂದೆ ಅಷ್ಟೇ ಎಂದು ಹೇಳಿದರು.
2018ರ ಚುನಾವಣೆಯಲ್ಲಿ ನೀವೆಲ್ಲಾ ಬಂದು ಗಲಾಟೆ ಮಾಡಿದ್ರಿ. ನಾನು ಸ್ಥಳೀಯರನ್ನ ನಿಲ್ಲಿಸಿ ಅಂದೆ. ಆದರೆ ನೀವೆಲ್ಲ ಹಠ ಹಿಡಿದು ಎರಡೂ ಕ್ಷೇತ್ರದಲ್ಲಿ ನಿಲ್ಲುವ ಹಾಗೆ ಮಾಡಿದ್ರಿ. ಬಹುಶಃ ಯಾವುದೇ ರಾಜಕಾರಣಿ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ನಿಲ್ಲುವ ಎದೆಗಾರಿಕೆ ಮಾಡಲಿಲ್ಲ. ಆ ಧೈರ್ಯ ಮಾಡಿದ್ದು ನೀವು. ರಾಮನಗರ ಕ್ಷೇತ್ರದ ಜನ ನಾನಿಲ್ಲದಿದ್ದರೂ ಗೆಲ್ಲಿಸಿಕೊಂಡು ಬರ್ತಾರೆ.
ನನ್ನನ್ನು ಬೆಳೆಸಿದ್ದೇ ರಾಮನಗರ ಜಿಲ್ಲೆಯ ಜನ. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿರಬಹುದು. ಆದರೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗ್ತಿದೆ. ಕುಮಾರಸ್ವಾಮಿ ಸಿಎಂ ಆದ್ರೆ ಸ್ತ್ರೀಶಕ್ತಿ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡ್ತಾರೆ ಅಂತ ಹೇಳಿದ್ರು. ಆದ್ರೆ ಈಗ ಮಾಡಲಿಲ್ಲ ಅಂತ ಅಪಪ್ರಚಾರ ಮಾಡ್ತಿದ್ದಾರೆ. ನಾನು ದೇವರ ಸಾಕ್ಷಿಯಾಗಿ ಹಿಂದೆ ಎಂದೂ ಹೀಗೆ ಹೇಳಿರಲಿಲ್ಲ ಎಂದರು.
2028ರ ಚುನಾವಣೆಗೆ ನಿಮ್ಮಲ್ಲೇ ಅಭ್ಯರ್ಥಿ ಆಗಬೇಕು. ಮಂಡ್ಯದ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ಬಂದು ನಿಲ್ಲಿ ಅಂದ್ರು. ಮಂಡ್ಯ ಜಿಲ್ಲೆಯ ಕಾರ್ಯಕರ್ತರು ಮನವಿ ಮಾಡಿದ್ದಾರೆ. ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡ್ತಿದ್ದಾರೆ ಅಂದ್ರು.
ಆದರೆ ನಾನು ಹೆದರಲ್ಲ. ಈ ಕ್ಷೇತ್ರದ ಜನರು ಯಾವತ್ತೂ ನನ್ನನ್ನು ಕೈಬಿಟ್ಟಿಲ್ಲ. ನಾನು ಬೇರೆಯವರ ತರ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ.? ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗೋ ಪ್ರಶ್ನೆಯೇ ಇಲ್ಲ. ಹಾಗಾಗಿ ಕಾರ್ಯಕರ್ತರು ಒಗ್ಗಟ್ಟಾಗಿ. ನಿಮ್ಮಲ್ಲೊಬ್ಬ ಲೀಡರ್ ಹುಟ್ಟಿಕೊಳ್ಳಬೇಕು. ಭಿನ್ನಾಭಿಪ್ರಾಯ ಮರತು ಎಲ್ಲರೂ ಒಗ್ಗಟ್ಟಾಗಿರಿ. 2028ಕ್ಕೆ ಓರ್ವ ಅಭ್ಯರ್ಥಿಯನ್ನ ರೆಡಿ ಮಾಡಿ. ರಾಮನಗರದಲ್ಲೂ ಒಬ್ಬನನ್ನು ಬೆಳೆಸಿದೆ. ಆದರೆ ಅವರು ಬೆನ್ನಲ್ಲೇ ಚೂರಿ ಹಾಕಿದ್ರು ಎಂದರು.