

ದುಬಾರಿ ಎಲ್‌ಪಿಜಿಗೆ ಪರ್ಯಾಯ ಇಂಧನ ಸಹಾಯಧನ
ಆಧುನಿಕತೆಯ ಭರಾಟೆಯಲ್ಲಿ ತೆರೆಮರೆಗೆ ಸರಿದಿತ್ತು
ಅಭಿಲಾಷ್ ತಿಟ್ಟಮಾರನಹಳ್ಳಿ ಚನ್ನಪಟ್ಟಣ
ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿರುವ ದಿನಬಳಕೆ ವಸ್ತುಗಳಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೂಡ ಒಂದು. ಈ ವಸ್ತು ಬಳಕೆದಾರರ ಜೇಬಿಗೆ ಭಾರವಾಗಿ ಹಲವಾರು ದಿನಗಳಾಗಿವೆ. ಈ ಮಧ್ಯೆ ಗ್ರಾಹಕ ಹಾಗೂ ರೈತಸ್ನೇಹಿ ಎನಿಸಿರುವ ಪರ್ಯಾಯ ಆಡುಗೆ ಅನಿಲ ಗೋಬರ್ ಗ್ಯಾಸ್ ಮತ್ತೆ ಮುನ್ನೆಲೆಗೆ ಬರುವ ವಾತಾವರಣ ಕಂಡುಬರುತ್ತಿದೆ.
ಹೌದು, ಎರಡು ದಶಕಗಳ ಹಿಂದೆ ಗೋಬರ್ ಗ್ಯಾಸ್ ಎಂಬುದು ಗ್ರಾಮೀಣ ಭಾಗದಲ್ಲಿ ಶ್ರೀಮಂತಿಕೆ ಹಾಗೂ ಸಾಮಾಜಿಕ ಸ್ಥಾನಮಾನದ ಪ್ರತೀಕವಾಗಿತ್ತು. ಆದರೆ, ದಿನಕಳೆದಂತೆ ಸಗಣಿಯ ಸಂಗ ಬಯಸದ ಕೈಗಳ ಸಂಖ್ಯೆ ಹೆಚ್ಚಳ, ಎಲ್ಪಿಜಿ ಗ್ಯಾಸ್ ಬಗೆಗಿನ ಒಲವು, ಗೋಬರ್ ಗ್ಯಾಸ್ ಸ್ಥಾವರಕ್ಕೆ ಸಿಗದ ಸೂಕ್ತ ಸಹಾಯಧನ, ಆಧುನೀಕರಣದ ಭರಾಟೆಯಿಂದಾಗಿ ತೆರೆಮರೆಗೆ ಸರಿಯುವಂತಾಯಿತು. ಈಗ, ಎಲ್ಪಿಜಿ ಗ್ಯಾಸ್ ಸಿಲಿಂಡರ್ ದರ ಗಗನಕ್ಕೇರಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮತ್ತೆ ಗೋಬರ್‌ಗ್ಯಾಸ್ ಬಗ್ಗೆ ಒಲವು ವ್ಯಕ್ತವಾಗುತ್ತಿದೆ.
ಏನಿದು ಗೋಬರ್‌ಗ್ಯಾಸ್?
ದೈನಂದಿನ ಉರುವಲು ಸಮಸ್ಯೆಗೆ ಪರಿಹಾರವಾಗಿ ಸಾಕುಪ್ರಾಣಿಗಳು ವಿಸರ್ಜಿಸುವ ಸಗಣಿ, ಗಂಜಲ ಹಾಗೂ ತ್ಯಾಜ್ಯ ಪದಾರ್ಥಗಳನ್ನು ನಿರ್ದಿಷ್ಟ ರೀತಿಯಲ್ಲಿ ಕೊಳೆಸುವಿಕೆಯಿಂದ ಮಿಥೇನ್ ಮತ್ತು ಕಾರ್ಬನ್ ಡೈ ಆಕ್ಸೆ ಡ್ ಮಿಶ್ರಿತ ಅನಿಲವನ್ನು ಪಡೆಯಬಹುದಾಗಿದೆ. ಈ ಅನಿಲವೇ ಬಯೋಗ್ಯಾಸ್ ಅಥವಾ ಗೋಬರ್ ಗ್ಯಾಸ್. ಇದು ಹೊಗೆ ಮತ್ತು ಮಸಿಯಿಂದ ಮುಕ್ತವಾಗಿರುವ ಶುದ್ಧ ಅಡುಗೆ ಅನಿಲವಾಗಿದ್ದು, ಪರ್ಯಾಯ ಇಂಧನ ವ್ಯವಸ್ಥೆ ಎಂದರೆ ತಪ್ಪಾಗಲಾರದು.
ಪರಿಸರಕ್ಕೆ ಹಾನಿ ಆಗದಂತೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಉತ್ಪತ್ತಿಯಾಗುವ ಅನಿಲ ಇದಾಗಿದೆ. ಇದು ಸ್ವಾಭಾವಿಕವಾಗಿದ್ದು ಆರೋಗ್ಯದ ದೃಷ್ಟಿಯಿಂದಲೂ ಅಡ್ಡ ಪರಿಣಾಮ ಬೀರುವುದಿಲ್ಲ. ಮನೆಯ ಹಿಂಭಾಗದಲ್ಲಿ ಗ್ಯಾಸ್ ಉತ್ಪಾದನೆ ಮಾಡುವ ಸ್ಥಾವರ ನಿರ್ಮಿಸಿಕೊಂಡು, ಮನೆಯಲ್ಲೇ ಉತ್ಪತ್ತಿಯಾಗುವ ರಾಸುಗಳ ಸಗಣಿಯಿಂದ ಮನೆಗೆ ಬೇಕಾದ ಅಡುಗೆ ಅನಿಲವನ್ನು ಉತ್ಪತ್ತಿ ಮಾಡಿಕೊಳ್ಳಬಹುದು. ಇದರ ನಿರ್ವಹಣೆಯೂ ಸುಲಭವಾಗಿದ್ದು, ಯಾವುದೇ ಖರ್ಚಿಲ್ಲದ ಅಡುಗೆ ಅನಿಲ ಇದಾಗಿದೆ. ಸ್ಥಾವರಕ್ಕೆ 50 ಕೆ.ಜಿ. ಸಗಣಿ ಹಾಕಿ ಕಲಸಿದರೆ, ಸುಮಾರು 3ರಿಂದ 4 ತಾಸು ಗ್ಯಾಸ್ ಬಳಸಬಹುದಾಗಿದೆ.
ರೈತಸ್ನೇಹಿ
ಗೋಬರ್ ಗ್ಯಾಸ್ ಘಟಕದಿಂದ ಉತ್ಪತ್ತಿಯಾಗುವ ತ್ಯಾಜ್ಯವೂ ಗುಣಮಟ್ಟದ ಗೊಬ್ಬರವಾಗಿದೆ. ಗ್ಯಾಸ್ ಉತ್ಪಾದನೆಯಾದ ನಂತರ, ಹೊರಬರುವ ತ್ಯಾಜ್ಯದಲ್ಲಿ ರಾಸಾಯನಿಕ ಸತ್ವ ಹೆಚ್ಚಿದ್ದು, ಇದರಲ್ಲಿ ಪೌಷ್ಟಿಕಾಂಶ ಹೆಚ್ಚಿರುತ್ತದೆ. ಆದ್ದರಿಂದ ಇದು ವ್ಯವಸಾಯಕ್ಕೆ ಪೂರಕವಾಗಿರಲಿದೆ. ಈ ಹಿನ್ನೆಲೆಯಲ್ಲಿ ಗೋಬರ್ ಗ್ಯಾಸ್ ಎಂಬುದು ರೈತಸ್ನೇಹಿ ಎಂಬುದರಲ್ಲಿ ಎರಡು ಮಾತಿಲ್ಲ. ಶುದ್ಧ ಅಡುಗೆ ಅನಿಲ, ಮಸಿಮುಕ್ತ ಪಾತ್ರೆಗಳು, ಅಡುಗೆ ತಯಾರಿ ಸಮಯ ಉಳಿತಾಯ, ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆ, ವಾತಾವರಣದ ರಕ್ಷಣೆ, ಸೌದೆ ಸಂಗ್ರಹಣೆ ದೂರ, ಬೆಳೆಗಳಿಗೆ ಒಳ್ಳೆಯ ಗೊಬ್ಬರ, ಮಾಲಿನ್ಯಮುಕ್ತ ಗ್ರಾಮ, ಪರಿಸರ ಸಂರಕ್ಷಣೆ ಹೀಗೆ ನಾನಾ ಅನುಕೂಲತೆಗಳು ಗ್ಯಾಸ್‌ನಿಂದ ಸಾಧ್ಯವಾಗಲಿದೆ.
ನರೇಗಾದಲ್ಲೂ ನೆರವು ಇದೆ
ಜಿಲ್ಲೆಯಲ್ಲಿ ಈ ಹಿಂದೆ ಗೋಬರ್ ಗ್ಯಾಸ್ ಬಳಕೆದಾರರ ಸಂಖ್ಯೆ ಹೆಚ್ಚಿತ್ತು. ಘಟಕ ನಿರ್ಮಾಣಕ್ಕೆ ಸರ್ಕಾರದ ಸಹಾಯಧನ ಕೂಡ ಹೆಚ್ಚಾಗಿದ್ದ ಕಾರಣ ಸಾವಿರಾರು ಮಂದಿ ನಿರ್ಮಿಸಿಕೊಂಡಿದ್ದರು. ಇದರೊಂದಿಗೆ ಇನ್ಫೋಸಿಸ್ ಸೇರಿ ವಿವಿಧ ಸಂಸ್ಥೆಗಳೂ ಇಂತಹ ಘಟಕಗಳಿಗೆ ಪ್ರೋತ್ಸಾಹ ನೀಡಿದ್ದವು. ಹೀಗಾಗಿ ಗೋಬರ್ ಗ್ಯಾಸ್ ಬಳಕೆ ಚಾಲ್ತಿಯಲ್ಲಿತ್ತು. ಸದ್ಯ ಸರ್ಕಾರದ ಪ್ರೋತ್ಸಾಹ ಇರದ ಕಾರಣ, ಈ ಘಟಕಗಳ ನಿರ್ಮಾಣ ಕಡಿಮೆಯಾಗಿದೆ. ನರೇಗಾ ಯೋಜನೆಯಲ್ಲಿ ಘಟಕ ನಿರ್ಮಾಣಕ್ಕೆ ಸಹಾಯಧನದ ಸೌಲಭ್ಯವಿದ್ದು, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಗೋಬರ್ ಗ್ಯಾಸ್ ಘಟಕಗಳು ಮತ್ತೆ ನಿಧಾನವಾಗಿ ತಲೆ ಎತ್ತುತ್ತಿವೆ.
ಜಿಲ್ಲಾಡಳಿತ ಗಮನಹರಿಸಲಿ!
ಗೋಬರ್‌ಗ್ಯಾಸ್ ಘಟಕ ನಿರ್ಮಾಣಕ್ಕೆ ಅಂದಾಜು 40ರಿಂದ 45 ಸಾವಿರ ರೂ. ವೆಚ್ಚವಾಗಲಿದೆ. ನರೇಗಾ ಯೋಜನೆಯಡಿ ಇದಕ್ಕೆ 20ರಿಂದ 25 ಸಾವಿರ ರೂ. ಅನುದಾನ ಸಿಗಲಿದೆ. ತಾಲೂಕು ಹೈನುಗಾರಿಕೆಯಲ್ಲಿ ಇಡೀ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದ್ದು, ಈ ಯೋಜನೆಗೆ ಪೂರಕವಾದ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಈ ರೈತಸ್ನೇಹಿ ಗೋಬರ್ ಗ್ಯಾಸ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡರೆ, ಜೈವಿಕ ಅನಿಲ ಉತ್ಪಾದನೆಯಲ್ಲಿ ಅಗ್ರಸ್ಥಾನಕ್ಕೆ ಏರಬಹುದಾಗಿದೆ. ಈ ಬಗ್ಗೆ ಸಂಬಂಧಿಸಿದವರು ಗಮನಹರಿಸಲಿ ಎಂಬುದೇ ವಿಜಯವಾಣಿ ಕಳಕಳಿಯಾಗಿದೆ.
ಗೋಬರ್ ಗ್ಯಾಸ್ ಘಟಕ ನಿರ್ಮಾಣಕ್ಕೆ ನರೇಗಾ ಯೋಜನೆಯಲ್ಲಿ ಅವಕಾಶವಿದೆ. ರೈತರು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲವಷ್ಟೇ. ಘಟಕ ನಿರ್ಮಾಣಕ್ಕೆ ಆಸಕ್ತಿ ಇರುವವರು ಸಂಬಂಧಪಟ್ಟ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿದರೆ ಮಾಹಿತಿ ದೊರೆಯಲಿದೆ. ಈ ಸಂಬಂಧ ಜಾಗೃತಿ ನೀಡುವ ಕೆಲಸ ಮಾಡುತ್ತೇವೆ.
ಶಿವಕುಮಾರ್, ತಾಪಂ ಇಒ, ಚನ್ನಪಟ್ಟಣ
ಈ ಹಿಂದೆ ಸರ್ಕಾರ ಘಟಕ ನಿರ್ಮಾಣಕ್ಕೆ ಪೂರ್ಣ ಪ್ರಮಾಣದ ಹಣವನ್ನು ಏಜೆನ್ಸಿ ಸಂಸ್ಥೆಗಳಿಗೆ ನೀಡುತ್ತಿತ್ತು. ಇದರೊಂದಿಗೆ, ಇನ್ಫೋಸಿಸ್ ಸಂಸ್ಥೆಯಿಂದ ಪ್ರೋತ್ಸಾಹ ಸಿಗುತ್ತಿತ್ತು. ಹಾಗಾಗಿ ಸಾಕಷ್ಟು ಘಟಕಗಳು ನಿರ್ಮಾಣವಾಗಿದ್ದವು. ನಂತರ ಅಂದಾಜು ವೆಚ್ಚದ ಅರ್ಧ ಹಣ ಮಾತ್ರ ಲಾನುಭವಿಗಳಿಗೆ ಸಿಗುತ್ತಿರುವುದರಿಂದ ಘಟಕ ನಿರ್ಮಾಣಕ್ಕೆ ಆಸಕ್ತಿ ಕಡಿಮೆಯಾಯಿತು. ಇದೀಗ, ಮತ್ತೆ ಘಟಕ ನಿರ್ಮಿಸಿಕೊಳ್ಳಲು ರೈತರು ಆಸಕ್ತಿ ತೋರಿಸುತ್ತಿದ್ದಾರೆ.
ಶ್ರೀನಿವಾಸ್, ಎಸ್‌ಎಲ್‌ವಿ ಗೋಬರ್ ಗ್ಯಾಸ್ ಏಜೆನ್ಸಿ
ಮೂರು ಹಸುಗಳನ್ನು ಸಾಕುತ್ತಿದ್ದೇವೆ. ಇವುಗಳ ಸಗಣಿಯಿಂದ ಗ್ಯಾಸ್ ತಯಾರಿಸುತ್ತಿದ್ದೇವೆ. ಇದರಿಂದ ಎಲ್‌ಪಿಜಿ ಸಿಲಿಂಡರ್ ಹಣ ಉಳಿಯುತ್ತಿದೆ. ಜತೆಗೆ ಜಮೀನಿಗೆ ಗುಣಮಟ್ಟದ ಗೊಬ್ಬರವೂ ದೊರಕುತ್ತಿದೆ.
ಲಕ್ಷ್ಮಮ್ಮ