

ಬಿಡದಿ: ಭಾರಿ ಗಾತ್ರದ ಮರದ ಕೊಂಬೆ ಅಂಗಡಿ ಮಳಿಗೆಗಳ ಮೇಲೆ ಮುರಿದು ಬಿದ್ದ ಪರಿಣಾಮ ಅಂಗಡಿ ಮಳಿಗೆಗಳು ಜಖಂ ಆಗಿ ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಘಟನೆ ಪಟ್ಟಣದ ಹಳೆ ಎಂ.ಜಿ ರಸ್ತೆಯಲ್ಲಿ ಶನಿವಾರ ನಡೆದಿದೆ.
ಪಟ್ಟಣದ ಬಿಜಿಎಸ್ ವೃತ್ತದಿಂದ ಎಂ.ಜಿ ರಸ್ತೆ, ರೈಲ್ವೆ ನಿಲ್ದಾಣದ ರಸ್ತೆ, ಪುರಸಭೆಗೆ ಹೋಗುವ ಮುಖ್ಯ ರಸ್ತೆಯಲ್ಲಿರುವ ಬೃಹತ್ ಅರಳಿ ಮರದ ಕೊಂಬೆ ಗಾಳಿ ಮಳೆಗೆ ಮುರಿದು ಬಿದ್ದಿದೆ. ರಸ್ತೆಯ ಪಕ್ಕದಲ್ಲಿದ್ದ ಹಣ್ಣಿನ ಅಂಗಡಿ, ಪನ್ಸಾರಿ ಅಂಗಡಿ, ತರಕಾರಿ ಅಂಗಡಿ ಮಳಿಗೆಗಳ ಮೇಲೆ ಮರದ ಕೊಂಬೆ ಬಿದ್ದು ಮೂರು ಅಂಗಡಿಗಳು ಜಖಂ ಆಗಿವೆ.
ಅರಳಿ ಮರದ ಕೊಂಬೆ ಅಂಗಡಿ ಮಳಿಗೆಗಳ ಮೇಲೆ ಬಿದ್ದಿದ್ದಲ್ಲದೆ ವಿದ್ಯುತ್ ತಂತಿಯ ಮೇಲು ಬಿದ್ದ ಪರಿಣಾಮ ಹಲವು ಕಂಬಗಳು ಮುರಿದು ಬಿದ್ದಿವೆ. ಅಲ್ಲದೇ ವಿದ್ಯುತ್ ತಂತಿಗಳು ಸಹ ಕಟ್ ತುಂಡಾಗಿದ್ದು, ವಿದ್ಯುತ್ ನಲ್ಲಿ ವ್ಯತ್ಯಯ ಉಂಟಾದ ಕಾರಣ ಬಾರಿ ಅನಾಹುತ ತಪ್ಪಿದೆ.
ಇದರ ಜೊತೆಗೆ ಜನನಿಬಿಡ ಪ್ರದೇಶವಾಗಿದ್ದು, ಅಂಗಡಿ ಮಳಿಗೆಗಳು, ಆಸ್ಪತ್ರೆ , ಬ್ಯಾಂಕ್ ಗಳು ಹಾಗೂ ಎಟಿಎಂಗಳು ಇಲ್ಲಿಯೇ ಇವೆ. ಪ್ರತಿನಿತ್ಯ ಸಾವಿರಾರು ಮಂದಿ ಓಡಾಟ ನಡೆಸುತ್ತಿದ್ದ ರಸ್ತೆ ಇದಾಗಿದೆ. ಮರದ ಕೊಂಬೆ ಬೀಳುವ ಸಮಯದಲ್ಲಿ ಯಾರು ಸಂಚಾರ ಮಾಡದ ಕಾರಣ ಅನಾಹುತ ತಪ್ಪಿದೆ. ನಂತರ ಪುರಸಭೆ ಅಧಿಕಾರಿಗಳನ್ನು ಮರವನ್ನು ತೆರವುಗೊಳಿಸುವ ಕಾರ್ಯ ಮಾಡಿದರು.
ಪತ್ರಿಕೆ ಎಚ್ವರಿಸಿತ್ತು: ಈ ಬೃಹತ್ ಗಾತ್ರದ ಅರಳಿ ಮರ ಬಹಳ ವರ್ಷದ ಹಳೆಯ ಮರವಾಗಿದ್ದು ಯಾವ ಸಮಯದಲ್ಲಿ ಬೇಕಾದರು ಬಿದ್ದು ಅನಾಹುತ ನಡೆಯಬಹುದೆಂದು 2022 ಸೆಪ್ಟೆಂಬರ್ 7 ರಂದು ವಿಜಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿಯನ್ನ ಪ್ರಕಟ ಮಾಡುವ ಮೂಲಕ ಸಂಭಂದಿಸಿದ ಅಧಿಕಾರಿಗಳನ್ನ ಎಚ್ಚರಿಸಿತ್ತು. ಇಷ್ಟಾದರೂ ಅಧಿಕಾರಿಗಳು ರ್ನಿಲಕ್ಷ್ತ್ರ್ಯತನ ತೋರಿದ್ದರ ಪರಿಣಾಮ ಶನಿವಾರ ಮರದ ಕೊಂಬೆ ಮುರಿದು ಬಿದ್ದಿದೆ.