ಬಮುಲ್ ಅಧ್ಯಕ್ಷ ಸ್ಥಾನಕ್ಕೆ ಕಸರತ್ತು ಬಿರುಸು ಕನಕಪುರ ಕ್ಷೇತ್ರದ ರಾಜ್‌ಕುಮಾರ್ ಹೆಸರು ಮುಂಚೂಣಿಯಲ್ಲಿ ಸಂಸದ ಸುರೇಶ್ ನೇತೃತ್ವದಲ್ಲಿ ಸಭೆ

2023-07-18_111059
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಬೆಂಗಳೂರು ಸಹಕಾರಿ ಹಾಲು ಒಕ್ಕೂಟ (ಬಮುಲ್) ಅಧ್ಯಕ್ಷ ಸ್ಥಾನದ ಚುನಾವಣೆಗೆ ಜು.19ರಂದು ಮುಹೂರ್ತ ನಿಗದಿಯಾಗಿದ್ದು, ಇದೀಗ ಆಕಾಂಕ್ಷಿಗಳ ರಾಜಕೀಯದಾಟ ಆರಂಭಗೊಂಡಿದೆ.

ಮಾಗಡಿಯ ನರಸಿಂಹಮೂರ್ತಿ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ನೂತನ ಸಾರಥಿ ನೇಮಕಕ್ಕೆ ಚುನಾವಣೆ ನಿಗದಿ ಆಗಿದೆ. ಮಾಗಡಿ ಎಂಪಿಸಿಎಸ್ ವ್ಯಾಪ್ತಿಯಿಂದ ನಿರ್ದೇಶಕರಾಗಿದ್ದ ನರಸಿಂಹಮೂರ್ತಿ ಜೂ.16ರಂದು ರಾಜೀನಾಮೆ ನೀಡಿದ್ದರು. ನಿಯಮದಂತೆ 15 ದಿನಗಳ ಒಳಗೆ ರಾಜೀನಾಮೆ ಅಂಗೀಕಾರವಾಗಿ, ಚುನಾವಣೆ ಎದುರಾಗಿದ್ದು, ಇದು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಚಟುವಟಿಕೆಗಳು ಬಿರುಸುಗೊಳ್ಳುವಂತೆ ಮಾಡಿದೆ.

ಪೈಪೋಟಿಯಲ್ಲಿ ಯಾರ‌್ಯಾರು?

ಪ್ರಮುಖವಾಗಿ ಕನಕಪುರ ಕ್ಷೇತ್ರದಿಂದ ಬಮುಲ್‌ಗೆ ನಿರ್ದೇಶಕರಾಗಿರುವ ರಾಜ್‌ಕುಮಾರ್ ಹೆಸರು ಮುಂಚೂಣಿಯಲ್ಲಿದೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಆಯ್ಕೆಯಾಗಿರುವ ನಿರ್ದೇಶಕ ಕೇಶವಮೂರ್ತಿ ಕೂಡ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಕನಕಪುರ ಕ್ಷೇತ್ರದವರೇ ಆದ ರಾಜ್‌ಕುಮಾರ್ ಅವರನ್ನೇ ನೇಮಕ ಮಾಡಿಕೊಳ್ಳಬೇಕು ಎನ್ನುವ ಇರಾದೆ ಡಿ.ಕೆ.ಸಹೋದರರಲ್ಲಿ ಇದೆ.

ಮತದಾರರು ಯಾರು?

ಚುನಾವಣೆಯಲ್ಲಿ 13 ನಿರ್ದೇಶಕರ ಜತೆಗೆ ಸರ್ಕಾರದಿಂದ ನೇಮಕವಾಗುವ ನಾಮನಿರ್ದೇಶಿತ ಸದಸ್ಯ, ಒಬ್ಬ ಕೆಎಂಎಫ್ ಪ್ರತಿನಿಧಿ, ಪಶುವೈದ್ಯ ಮತ್ತು ಪಶುಪಾಲನಾ ಇಲಾಖೆ ನಿರ್ದೇಶಕ, ಹಾಗೂ ಸಹಕಾರ ಇಲಾಖೆ ಜಂಟಿ ನಿರ್ದೇಶಕರು ಮತದಾನ ಮಾಡಬಹುದಾಗಿದೆ. ಆದರೆ ಪ್ರಸ್ತುತ ಕಾಂಗ್ರೆಸ್‌ನ 8 ನಿರ್ದೇಶಕರಿದ್ದು, ಬಿಜೆಪಿ- ಜೆಡಿಎಸ್‌ನಿಂದ 5 ನಿರ್ದೇಶಕರು ಇದ್ದಾರೆ. ಉಳಿದಂತೆ ಒಬ್ಬ ನಾಮನಿರ್ದೇಶಿತ ಸದಸ್ಯ ಇದ್ದು ಗೆಲುವಿಗೆ 9 ಮತಗಳ ಅಗತ್ಯವಿದೆ. ಸರ್ಕಾರದ ಪ್ರತಿನಿಧಿಗಳು ಬಹುತೇಕ ಆಡಳಿತಾರೂಢ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಲಿದ್ದಾರೆ ಎನ್ನುವ ಅಂದಾಜಿದ್ದು, ಕಾಂಗ್ರೆಸ್‌ನವರೇ ಅಧ್ಯಕ್ಷರಾಗುವುದು ಬಹುತೇಕ ನಿಚ್ಚಳವಾಗಿದೆ.

ಎಂಪಿ ಸಭೆ

ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಕೆಎಂಎಫ್ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿ ಆಗಿದ್ದು, ಬಮುಲ್ ಅಧ್ಯಕ್ಷ ಸ್ಥಾನವನ್ನೂ ತಮ್ಮ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆದಿದೆ. ಈ ಹಿನ್ನೆಲೆಯಲ್ಲಿ ಸಂಸದ ಡಿ.ಕೆ.ಸುರೇಶ್ ಇಂದು (ಜು.18)ರಂದು ಬಮುಲ್ ನಿರ್ದೇಶಕರ ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಸಭೆಯಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಒಟ್ಟಾರೆ ಮಂಗಳವಾರವೇ ಬಮುಲ್ ನೂತನ ಅಧ್ಯಕ್ಷರು ಯಾರಾಗಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಲಿದೆ.

ನೂತನ ಅಧ್ಯಕ್ಷರಿಗೆ ಸವಾಲು

ಹೊಸದಾಗಿ ಯಾರೇ ಅಧ್ಯಕ್ಷರಾದರೂ ಅವರಿಗೆ ಹಾಲಿನ ಖರೀದಿ ಮತ್ತು ಮಾರಾಟ ದರ ಹೆಚ್ಚಿಸುವ ದೊಡ್ಡ ಸವಾಲು ಎದುರಾಗಲಿದೆ. ಹಾಲಿನ ಖರೀದಿ ದರ ಹೆಚ್ಚಳ ಮಾಡಬೇಕಾದರೆ, ಮಾರಾಟ ದರವನ್ನೂ ಹೆಚ್ಚಿಸಬೇಕು ಎನ್ನುವ ಬೇಡಿಕೆ ಬಮುಲ್‌ನಿಂದ ಇದೆಯಾದರೂ, ಇದಕ್ಕೆ ಸರ್ಕಾರ ಸಹಮತ ವ್ಯಕ್ತಪಡಿಸಿಲ್ಲ. ಕಳೆದ ಎರಡು ದಿನಗಳ ಹಿಂದೆ ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿಯೂ ಸ್ಪಷ್ಟ ನಿರ್ಧಾರವಿಲ್ಲದೆ ಸಭೆ ಮುಂದೂಡಲಾಗಿದೆ. ಈಗಾಗಲೇ ಬಮುಲ್ ಪ್ರತಿ ತಿಂಗಳು 15 ಕೋಟಿ ರೂ. ನಷ್ಟ ಅನುಭವಿಸುತ್ತಿದ್ದು, ಹೊಸ ಅಧ್ಯಕ್ಷರು ಈ ಸಮಸ್ಯೆಗಳನ್ನು ಹೇಗೆ ಬಗೆಹರಿಸಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net