

ಕನಕಪುರ
ಬೆಂಗಳೂರು ನಗರದಲ್ಲಿ ಮೆರೆಯುತ್ತಿದ್ದ ರೌಡಿಯೊಬ್ಬನನ್ನು ಹತ್ಯೆಗೈದ ಮೂವರು ಆರೋಪಿಗಳನ್ನು ಕೋಡಿಹಳ್ಳಿ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಅಜಯ್ (26) ಹತ್ಯೆಯಾದ ರೌಡಿಶೀಟರ್. ತಾಲೂಕಿನ ಕೋಡಿಹಳ್ಳಿ ಹೋಬಳಿಯ ದಿಂಬದಹಳ್ಳಿಯ ರಾಜಣ್ಣ (48), ಕಲ್ಪನಾ (44) ಹಾಗೂ ಮಾರೇಗೌಡ (60) ಬಂಧಿತರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಜೆ ಪುರುಷ ಆರೋಪಿಗಳನ್ನು ರಾಮನಗರ ಉಪಕಾರಾಗೃಹಕ್ಕೆ ಹಾಗೂ ಕಲ್ಪನಾಳನ್ನು ಬೆಂಗಳೂರಿನ ಕೇಂದ್ರ ಕಾರಾಗೃಹಕ್ಕೆ ಕಳಿಸಲಾಗಿದೆ.
ಘಟನೆ ವಿವರ: ಕನಕಪುರ ತಾಲೂಕಿನ ದಿಂಬದಹಳ್ಳಿಯ ಮಲ್ಲಯ್ಯ ಅವರಿಗೆ ಆದಿತ್ಯ ಮತ್ತು ಅಜಯ್ ಎಂಬ ಇಬ್ಬರು ಮಕ್ಕಳಿದ್ದು, ಅಜಯ್ ಬೆಂಗಳೂರಿನ ಬನಶಂಕರಿ ಬಳಿಯ ಪ್ರಗತಿಪುರದಲ್ಲಿ ಆಟೋ ಚಾಲಕನಾಗಿದ್ದರೂ ಕುಖ್ಯಾತ ರೌಡಿಶೀಟರ್ ಆಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಈತನ ವಿರುದ್ಧ ಜಯನಗರ, ಜೆಪಿ ನಗರ, ಕುಮಾರಸ್ವಾಮಿ ಲೇಔಟ್, ತಲಘಟ್ಟಪುರ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು.
ಹದಿನೈದು ದಿನಗಳ ಹಿಂದೆ ಸ್ವಗ್ರಾಮ ದಿಂಬದಹಳ್ಳಿಗೆ ಬಂದಿದ್ದ ಅಜಯ್, ಇಲ್ಲಿಯೂ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ. ಈತನ ಮನೆಯ ಪಕ್ಕದಲ್ಲಿನ ಜಾಗದ ವಿಚಾರದಲ್ಲಿ ಈತನ ಸಹೋದರ ಹಾಗೂ ಪಕ್ಕದ ಮನೆಯ ಮರಿಯಣ್ಣನ ಕುಟುಂಬದ ನಡುವೆ ವೈಷಮ್ಯವಿತ್ತು. ನಿತ್ಯ ಕುಡಿದು ಗಲಾಟೆ ಮಾಡುತ್ತಿದ್ದ ಅಜಯ್ ಪಕ್ಕದ ಮನೆಯವರ ಮೇಲೆ ಭಾನುವಾರ ರಾತ್ರಿಯೂ ಗಲಾಟೆ ಮಾಡಿದ್ದ. ಈತನ ಉಪಟಳದಿಂದ ರೋಸಿದ್ದ ರಾಜಣ್ಣ, ಕಲ್ಪನಾ ಹಾಗೂ ಮಾರೇಗೌಡ ರಾತ್ರೋರಾತ್ರಿ ರೊಚ್ಚಿಗೆದ್ದು ರಿಪೀಸ್ ಪಟ್ಟಿ ಹಿಡಿದು ಮನೆಗೆ ನುಗ್ಗಿ ಅಜಯ್‌ಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ತಲೆಗೆ ಪೆಟ್ಟು ಬಿದ್ದು ಅಜಯ್ ಮೃತಪಟ್ಟಿದ್ದಾನೆ. ಈ ಸಂಬಂಧ ಕೋಡಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ, ಎಎಸ್‌ಪಿ ಸುರೇಶ್, ಸರ್ಕಲ್ ಇನ್‌ಸ್ಪೆಕ್ಟರ್‌ಗಳಾದ ಕೆ.ಎಲ್.ಕೃಷ್ಣ, ಮಿಥುನ್‌ಶಿಲ್ಪಿ ಭೇಟಿ ನೀಡಿದ್ದರು.